September 27, 2016

ಮತ್ತೊಂದು ಒಂಟಿ ಮರ

ಕವಲುದಾರಿಯ ಆರಂಭದಿ ಇರುವ
ಒಂಟಿ ಮರ ನಾ...
ಹುಲುಸಾಗಿ ಬೆಳೆದಿಹೆ ನಾ..
ನೆರಳಿದೆ, ಫಲವಿದೆ, ಹಕ್ಕಿಗಳ ಕಲರವವಿದೆ ನನ್ನೊಳು

ಮುಂದಿನ ಬಯಲಿಂದ ಬರುವರು ಹಲವರು
ಕವಲು ದಾರಿ ಗೊಂದಲಿಸುವುದೋ... ಹಾದಿಯಲೊಂದು ತಾಣಕ್ಕಾಗೋ...
ಅರಿಯೆ ನಾ...
ವಿರಮಿಸುವರು ನನ್ನಲ್ಲಿ ಒಂದಷ್ಟು ಹೊತ್ತು
ನನ್ನ ನೆರಳಲ್ಲಿ..
ತಿನ್ನುವರು ನಾನಿತ್ತ ಫಲ

ತನು ಮನಗಳು ಹಗುರಾದವೇನೋ
ಮುಂದಿನ ದಾರಿ.. ಮುಂದಿನ ನಿಲ್ದಾಣದ ಅರಿವಾಯ್ತೇನೋ
ನನ್ನ ಮತ್ತೆ ಒಂಟಿಯಾಗಿಸಿ ಹೊರಟರೆಲ್ಲೋ
ಮುಂದಿನ ಪಯಣಿಗನ ನಿರೀಕ್ಷೆಯಲ್ಲಿ
ಮತ್ತೆ ಮತ್ತೆ ಒಂಟಿ ಮರ

No comments:

Post a Comment