July 07, 2014

ಒಂಟಿಮರದ ವ್ಯಥೆ


ನೀ ಬಂದೆ..
ಸಂತಸದ ಚಿಲಿಪಿಲಿ ತಂದೆ
ನನ್ನ ಮನಕ್ಕೆ ಸುಖ ನೀಡಿದೆ
ನನ್ನೊಂಟಿಕಾಲ ತಪಸ್ಸಿಗೆ ಫಲ ನೀನೆಂದುಕೊಂಡೆ
ನನ್ನೊಡನಾಡುವೆ ನೀ ಎಂಬ ಭಾವ ಬಿತ್ತಿದೆ

ಬಲು ಬುದ್ದಿವಂತ ನೀ
ಬರಿಯ ಸ್ವಾರ್ಥಸಾಧನೆಗೆ ನನ್ನ ಬಳಸಿಕೊಂಡೆ ನೀ
ನನ್ನ ಪರೀಕ್ಷಿಸಿದೆ ನೀ
ನನ್ನಾಳವ ತಿಳಕೊಂಡೆ ನೀ

ನಾ ನಿನಗೆ ಬೆತ್ತಲಾಗುತ್ತಾ ಹೋದೆ
ನಿನ್ನ ಗೂಡಿಗೆ ನನ್ನೊಡಲು ಸಮಧಾನಿಸಲಿಲ್ಲ
ಕೂಡಿಟ್ಟ ಕಡ್ಡಿಗಳ ಬಿಟ್ಟು ನೀ ಮುನ್ನಡೆದೆ
ನಾ ನಿಂತಲ್ಲೇ ನಿಂತೆ ನೀನಿತ್ತ ಕಸ ಹೊತ್ತು....

ಇನ್ನೊಮ್ಮೆ ನೀ ಬಂದರೂ ನಾ ನಿನಗಾಗಿ ಇರುವೆ ಪುಟ್ಟ ಹಕ್ಕೀ
ನಿನ್ನ ಅಲ್ಪಕಾಲದ ಸಾಂಗತ್ಯ ಮುದಗೊಳಿಸಿತ್ತು ನನ್ನ
ನಿನ್ನ ಪುಟ್ಟ ಗೂಡ ನನ್ನಲ್ಲಿ ಕಟ್ಟು..
ನಿನ್ನ ಪುಟ್ಟ ಮಕ್ಕಳ ಚಿಲಿಪಿಳಿಯ ಕೇಳಿ ಸಂತಸಪಡುವೆ
ನನ್ನ ಒಳ್ಳೆಯತನವೆಂದುಕೊಳುವೆಯೋ ಇಲ್ಲಾ
ದೌರ್ಬಲ್ಯವೆಂದು ತಿಳಿಯುವೆಯೋ
ನಿನಗೆ ಬಿಡುವೆ...