July 07, 2014

ಒಂಟಿಮರದ ವ್ಯಥೆ


ನೀ ಬಂದೆ..
ಸಂತಸದ ಚಿಲಿಪಿಲಿ ತಂದೆ
ನನ್ನ ಮನಕ್ಕೆ ಸುಖ ನೀಡಿದೆ
ನನ್ನೊಂಟಿಕಾಲ ತಪಸ್ಸಿಗೆ ಫಲ ನೀನೆಂದುಕೊಂಡೆ
ನನ್ನೊಡನಾಡುವೆ ನೀ ಎಂಬ ಭಾವ ಬಿತ್ತಿದೆ

ಬಲು ಬುದ್ದಿವಂತ ನೀ
ಬರಿಯ ಸ್ವಾರ್ಥಸಾಧನೆಗೆ ನನ್ನ ಬಳಸಿಕೊಂಡೆ ನೀ
ನನ್ನ ಪರೀಕ್ಷಿಸಿದೆ ನೀ
ನನ್ನಾಳವ ತಿಳಕೊಂಡೆ ನೀ

ನಾ ನಿನಗೆ ಬೆತ್ತಲಾಗುತ್ತಾ ಹೋದೆ
ನಿನ್ನ ಗೂಡಿಗೆ ನನ್ನೊಡಲು ಸಮಧಾನಿಸಲಿಲ್ಲ
ಕೂಡಿಟ್ಟ ಕಡ್ಡಿಗಳ ಬಿಟ್ಟು ನೀ ಮುನ್ನಡೆದೆ
ನಾ ನಿಂತಲ್ಲೇ ನಿಂತೆ ನೀನಿತ್ತ ಕಸ ಹೊತ್ತು....

ಇನ್ನೊಮ್ಮೆ ನೀ ಬಂದರೂ ನಾ ನಿನಗಾಗಿ ಇರುವೆ ಪುಟ್ಟ ಹಕ್ಕೀ
ನಿನ್ನ ಅಲ್ಪಕಾಲದ ಸಾಂಗತ್ಯ ಮುದಗೊಳಿಸಿತ್ತು ನನ್ನ
ನಿನ್ನ ಪುಟ್ಟ ಗೂಡ ನನ್ನಲ್ಲಿ ಕಟ್ಟು..
ನಿನ್ನ ಪುಟ್ಟ ಮಕ್ಕಳ ಚಿಲಿಪಿಳಿಯ ಕೇಳಿ ಸಂತಸಪಡುವೆ
ನನ್ನ ಒಳ್ಳೆಯತನವೆಂದುಕೊಳುವೆಯೋ ಇಲ್ಲಾ
ದೌರ್ಬಲ್ಯವೆಂದು ತಿಳಿಯುವೆಯೋ
ನಿನಗೆ ಬಿಡುವೆ...

June 29, 2014

ಜೀವನದ ಓಟ

ಓಟವೇ ಗುರಿ..ಗಡಿಯಾರವೇ ದೇವರು ಎಂದು  ನನ್ನಮ್ಮ ಹೇಳುತ್ತಿದ್ದಳು.ಆಗ ಅರ್ಥವಾಗುತ್ತಿರಲಿಲ್ಲ..
ಹೌದು ಅದೇ ಸತ್ಯ ಎಂದರಿವಾದದ್ದು ಕೆಲಸ...ಮದುವೆ...ಮಗುವಿನ...ಕಾಲ ಪ್ರಾರಂಭವಾದಾಗ...

'Temple run' - ದೇವಾಲಯ ಓಟ??? ಆಡುತ್ತಿದ್ದಾಗ ಅನಿಸಿತು.. ಜೀವನವೂ ಓಟವಾಗಿದೆ.
ಅಡೆತಡೆಗಳ ಮೀರಿ ಮುಂದುವರೆಯುವ ಛಲ, ತಿರುವುಗಳಲ್ಲಿ ಸರಿಯಾದ + ಸಂಯೋಚಿತ ತೀರ್ಮಾನ, ಕಲ್ಲು ,ಬೆಟ್ಟ, ನದಿ ಏನೇ ಇದ್ದರೂ ಹಿಂದು ಮುಂದೂ ಯೋಚಿಸದೆ ಆಟಗಾರ ಓಡುತ್ತಿರುತ್ತಾನೆ.ಇಲ್ಲವಾದಲ್ಲಿ ಸೋಲು..ಮಗದೊಮ್ಮೊ ಆಟ ಪ್ರಾರಂಭ.ಇಲ್ಲಿ ಎಷ್ಟೇ ಬಾರಿ ಸೋತರೂ ಮತ್ತೊಮ್ಮೆ ಅದೇ ಉತ್ಸಾಹ ಇರುವುದು. ಮತ್ತು ಎಷ್ಟು  ಬಾರಿ ಬೇಕಾದರು ಆಡುವ ಅವಕಾಶ..
ಆದರೆ ಜೀವನ!?
ಆಡು- ಗೆಲ್ಲು- ಮುಂದುವರೆ.
ಇಲ್ಲಾ..
ಆಡು - ಸೋಲು - ಸಾವು!!!!

ಓಟದ ವೇಗ ನಮ್ಮ ನಿರ್ಧಾರ...ಅಲ್ಲಿ ಬರುವ ಅಡೆ ತಡೆಗಳು ದೇವೇಛ್ಛೆ...ಮೀರಿ ಬೆಳೆಯುವಲ್ಲಿ ನಮ್ಮ ಗೆಲುವು.

ವೇಗ ಎಲ್ಲರೂ ಇಷ್ಟ ಪಡುತ್ತಾರೆ. ನಮ್ಮ ಮನಸ್ಸಂತೂ ಬೆಳಕಿಗಂತ ವೇಗವಂತೆ.ಓಟ ಚಲನೆಗೆ ವೇಗವನ್ನು ಕೊಡುವುದು.ಇನ್ನೂ ಒಂದು ಹೆಜ್ಜೆ ಮುಂದುವರಿದು ಚಲನೆಗೆ ಮಾನವ ನಿರ್ಮಿತ ವಾಹನಗಳ ಬಳಸಿದರೆ ಇನ್ನೂ ವೇಗ ಗಳಿಸಬಹುದು.
ಸಮಯ ಉಳಿತಾಯ ಮಾಡಬೇಕು..ವೇಗವಾಗಿ ಕಛೇರಿ ತಲುಪುವ ಆತುರ ಇವು ಶಾಶ್ವತವಾಗಿ ನನಗೆ ನಿಧಾನವೇ ಪ್ರಧಾನ ಎಂಬ ಸತ್ಯವನ್ನು ಕಲಿಸಿದೆ.ಸುಮಾರು ನಾಲಕ್ಕು ತಿಂಗಳುಗಳ ಕಾಲ ಪರಾವಲಂಬಿಯನ್ನಾಗಿಸಿ ಇದೀಗ ನನ್ನ ಕೆಲಸಗಳನ್ನು ನಾನಾಗೆ ಮಾಡಲು ಸಾಧ್ಯವಾದ ಖುಷಿ ಸ್ವಾವಲಂಬೀ ಜೀವನದ ಸಂತೋಷವನ್ನು ಕೊಡುತ್ತಿದೆ.
ಆದರೂ ಮೊದಲು ಯಾವುದೇ ಹಿಂಜರಿಕೆಯಿಲ್ಲದೆ ಮಾಡುತ್ತಿದ್ದ ಸುಲಭ ಕೆಲಸಗಳನ್ನು avoid ಮಾಡಬೇಕೆನ್ನುವುದು ಮನಕ್ಕೆ ಕಷ್ಟವೆನಿಸುವುದು
ಎಲ್ಲಾ ಮೀರಿ ಬಂದಿರುವುದರ ಬಂದಂತೆ ಜೀವನವನ್ನು ಓಡಿಸುವುದು ಓಡಿಸುತ್ತಲೇ ಇರುವುದೇ ಗೆಲುವು..:-)