August 12, 2013

ಹೀಗೊಂದು ಸ್ವಗತ"ರಾಧಾ..." ಜೇನಲ್ಲಿ ಅದ್ದಿದಂತಹ ಸುಮಧುರ ದನಿ ನನ್ನ ಕೃಷ್ಣನದು
"ಮ್ ಮ್ ಮ್ ..." ಅಂದಿದ್ದೆ ನಾನು.
ನಿನ್ನಲ್ಲೇನೋ ಹೇಳಬೇಕಿತ್ತಲ್ಲೇ ರಾಧೇ ಎಂದನವನು.

ಬೆಳಗಿನಲ್ಲೇ ಶುಭಶಕುನವಾಗಿರಲಿಲ್ಲ ನನಗೆ, ಆದ್ದರಿಂದ ಅವನೇನ್ನವುದೂ ಬೇಡವಾಗಿತ್ತು.
ನಿನ್ನ ಎದೆ ಬಡಿತದಲ್ಲೇ ನನಗೆ ಎಲ್ಲವೂ ಕೃಷ್ಣ...  ಯಾವ ಮಾತುಗಳೂ ಬೇಡ ಕೃಷ್ಣಾ ಎಂದರೂ ಕೇಳಲಿಲ್ಲ ಅವನು.

ರಾಧೆ, ಮಾವ ಅಕ್ರೂರ ಮನೆಗೆ ಬಂದಿರುವನು, ನನ್ನನ್ನು ಮಥುರೆಗೆ ಕರೆದೊಯ್ಯುತ್ತಾನಂತೆ...ದೊಡ್ಡ ರಥ ತಂದಿರುವನು..
ಹೀಗೆ ಹೋಗಿ ಹಾಗೆ ಬರುವೆನು ನನ್ನ ರಾಧಿಕೆ... ನಿನ್ನ ಹೊತ್ತು ಹೋಗಲು ಇದೋ ನನ್ನ ಕೊಳಲು ನಿನ್ನಲ್ಲಿರಲಿ ಎಂದ.
ಆಘಾತಗೊಂಡಿದ್ದ ನನಗೆ ಏನು ಹೇಳಬೇಕೆಂದು ಅರಿಯಲೇ ಇಲ್ಲ..
ಛೇ .... ಜಾಗರೂಕನಾಗಿರು ಎಂದಾದರೂ ಹೇಳಬೇಕಿತ್ತಲ್ಲಾ...

ನೆನ್ನೆಯಷ್ಟೇ ನಡೆದಿದೆಯೇನೋ ಎಂಬಂತೆ ಎಲ್ಲವೂ ನಿಚ್ಚಳ
ಮಾತು ತಪ್ಪಿ ಕುಳಿತಿದ್ದ ನನಗೆ ತನ್ನ ಕೊಳನ್ನಿತ್ತು ಕಾಯುತ್ತಿರು ರಾಧೆ ನನಗಾಗಿ, ನಿನಗಾಗಿ ಬಂದೇ ಬರುತ್ತೇನೆಂದು ಹೋದವ ಇಂದಿಗೂ ನನ್ನ ಕಣ್ಣಿಗೆ ಬಿದ್ದಿಲ್ಲ.. ಆದರೆ ನನ್ನ ಹೃದಯದ ಕಣ್ಣಲ್ಲಿ ಸದಾ ಆತನಿದ್ದಾನೆ.

ದುಷ್ಟ ಕಂಸನನ್ನು ನನ್ನ ಕೃಷ್ಣ ಸಂಹರಿಸಿದನಂತೆ, ಆತ ದೇವರಂತೆ... ಏನೇನೋ ಜನರೆಂದರು, ಎಲ್ಲರೂ ಆತನನ್ನು ಆರಾಧಿಸಿದರು.
ಆದರೆ ನನ್ನ ಆರಾಧನೆಯ ಸ್ವರೂಪವೇ ಬೇರೆ.

ನನ್ನ ಹೃದಯಕ್ಕೆ ಆತ ಒಡೆಯ, ನನ್ನ ಸುಖಸಂತೋಷಗಳಿಗೆ ಅವನೇ ವಾರಸುದಾರ, ನನ್ನ ತುಟಿಯಂಚಿನ ನಗು ಆತನಿಗಾಗಿ.
ಕಾಯುತ್ತಿದ್ದೇನೆ.. ಕೊನೆಯುಸಿರು ಇರುವವರೆಗೂ ಕಾಯುತ್ತಿರುವೆ.


ಆಗಿನ್ನೂ ನನಗೆ ವರುಷ ಆರಾಗಿತ್ತು ಅನಿಸುತ್ತದೆ.
ಒಂದಿಷ್ಟು ಜನ ನಮ್ಮೂರಿಗೆ ವಲಸೆ ಬಂದಿದ್ದರು, ಪಾಪ..... ಅವರ ಊರು ಮುಳುಗಡೆಯಾಗಿತ್ತು.
ಅದರಲ್ಲೊಬ್ಬ ಶ್ಯಾಮವರ್ಣದ ತುಂಟ, ಅವನಮ್ಮನ ಕಣ್ಣಗೊಂಬೆ. ಎಷ್ಟೊಂದು ಶೃಂಗರಿಸುತ್ತಿದ್ದಳು ಆ ತಾಯಿ. ಬಹುಷಃ, ನನ್ನಮ್ಮ ಹುಡುಗಿಯಾದ ನನ್ನನ್ನೇ ಅಷ್ಟು ಶೃಂಗರಿಸುತ್ತಿರಲಿಲ್ಲವೇನೋ.ಊರಿಗೆ ಬಂದ ದಿನವೇ ಊರು ಸುತ್ತಲು ತನ್ನ ತುಂಟ ಗುಂಪಿನೊಂದಿಗೆ ಬಂದನಾತ.ಹೊಸ ಗುಂಪನ್ನು ಸೇರಿಸಿಕೊಳ್ಳುವ ಇಛ್ಚೆ ನಮ್ಮ ಗುಂಪಿಗಿರಲಿಲ್ಲ. ಆದರೆ, ಆತನಲ್ಲೇನೋ ಆಕರ್ಷಣೆಯಿತ್ತು.ಆತನೇ ಬಳಿ ಬಂದ, ಕಾಡಿಸಿದ, ಜಡೆ ಎಳೆದ. ನನಗೂ ಅದೇ ಬೇಕಿತ್ತೇನೋ.ದೂರು ಹೊತ್ತು ಮನೆಗೆ ಹೋಗಿದ್ದೆ ಅಂದು.ಮಕ್ಕಳ ಜಗಳ ಬಿಡು ಎಂದು ಹಿರಿಯರಾರೂ ಗಮನ ಹರಿಸಿರಲಿಲ್ಲ.

ಮರುದಿನದಿಂದಲೇ ನಮ್ಮ ದೋಸ್ತಿ ಸುರುವಾಗಿತ್ತು.
ಅವ ಎಲ್ಲಿ ಹೋದರೂ ಅವನ ಹಿಂದೆ ನಾ ಹೋಗುತ್ತಿದ್ದೆ.
ಅವನಿಷ್ಟ ಏನೆಂದು ತಿಳಕೊಂಡೆ.ಮನೆಯಿಂದ ಬೆಣ್ಣೆ ನಾನೂ ಕದ್ದು ಆತನಿಗೆ ತಿನ್ನಿಸಲಾರಂಭಿಸಿದೆ.
ಅವನಮ್ಮನಿಗಿಂತಲೂ ಜಾಸ್ತಿ ಮುಚ್ಚಟೆ ಮಾಡುತ್ತಿದ್ದೆ.

ಹಾಗೆ ನೋಡ ನೋಡುತ್ತಿದ್ದಂತೆ ವಯಸ್ಸು ತನ್ನಾಟವನ್ನು ತೋರಿಸತೊಡಗಿತ್ತು. ಹುಡುಗರ ಗುಂಪಿನೊಡನೆ ಸೇರಬಾರದೆಂದು ಮನೆಯಲ್ಲಿ ಕಟ್ಟುನಿಟ್ಟು. ಆದರೆ ಆತನ ಆಕರ್ಷಣೆ ಎಲ್ಲಕ್ಕಿಂತ ದೊಡ್ಡದು. ಕೃಷ್ಣ ಎಂದರೇ ಆಕರ್ಷಣೆ. ಆತನಿಗೂ ನನ್ನಲ್ಲಿ ನಲ್ಮೆಯಿತ್ತು.ಮನೆಯಲ್ಲಿ ಸುಳ್ಳು ಹೇಳಿ ಗೆಳತಿಯರ ಕಾವಲಿನ ರಕ್ಷೆಯಲ್ಲಿ ಸುಂದರ ತೋಟದಲ್ಲಿ ಅವನೊಂದಿಗಿರುತ್ತಿದ್ದೆ. ಅವನ ಹರವಾದ ಎದೆಯಲ್ಲಿ ಮಲಗಿ ಎದೆ ಢವ ಕೇಳುವುದೇ ನನ್ನ ಪ್ರೀತಿಯ ಕಾಯಕವಾಗಿತ್ತು.
ಅವನೂ ರಸಿಕ, ಮೊಗೆದಷ್ಟೂ ಪ್ರೀತಿ ಇತ್ತಿದ್ದ.

ಎಲ್ಲಿ ಹೋದವು ಆ ಪ್ರೀತಿ... ಆತನ ಮೈ ವಾಸನೆ.. ಆ ಸ್ಪರ್ಷ.. ಉಸಿರು..
ಇಂದಿಗೂ ಅವನ ಇರುವು ನನ್ನೆದುರು ಇರದಿದ್ದರೂ ಅನುಭವಿಸಬಲ್ಲೆ.

ಆತ ಬಿಟ್ಟು ಹೋದ ಬಳಿಕ ಹುಚ್ಚಿಯಾಗುತ್ತೇನೋ ಅನ್ನಿಸಿತ್ತು. ಆದರೆ ಆತನ ಕಾಯುವಿಕೆಯಲ್ಲಿ ಎಲ್ಲವೂ ಮರೆತು ಹೋಯಿತು.ಜನ ಏನೇನೋ ಮಾತನಾಡಿದರು, ಯಾವುದೂ ನನ್ನನ್ನು ವಿಚಲಿತಗೊಳಿಸಲಿಲ್ಲ.

ನನ್ನ ಕೃಷ್ಣನನ್ನು ನಾನು ಬಲ್ಲೆ.

ನಾನೇ ಆತನ ಆತ್ಮ ಸಂಗಾತಿ ಎಂದೆಂದಿಗೂ....

ಆತನಿಗೆ ಕಾಯುವುದೇ ನನ್ನ ದಿನ,ಆತನಿಗೋಸ್ಕರವೇ ನನ್ನ ರಾತ್ರಿ.

ಎಷ್ಟೇ ಜನುಮವಿರಲಿ ಕೃಷ್ಣ ಎಂದೆಂದಿಗೂ ನನ್ನವನೇ.

ಕಾಯುತ್ತಲೇ ಇರುತ್ತೇನೆ...

ಯಾಕೋ ಎದೆ ಢವ ಹೆಚ್ಚುತ್ತಿದೆ..

ಕಣ್ಣು ಬಾಡುತ್ತಿದೆ..

ಕೃಷ್ಣ ಕರೆಯುತ್ತಿದ್ದಾನೆ...

ಬಂದೆ ಕೃಷ್ಣ್............................................

No comments:

Post a Comment