August 21, 2011

ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು


ಶ್ಯಾಮ ವರ್ಣ, ನವಿಲುಗರಿ, ಕೊಳಲು, ಅಂಬಾ ಅನ್ನುವ ಗೋವಿನ ಹಿಂಡು, ರಾಧೆ, ಗೋಪಿಕೆಯರು, ವೃಂದಾವನ ಇಷ್ಟರಲ್ಲೇ ಕೃಷ್ಣ ಪೂರ್ತಿಯಾಗುವನೇ? ಕೃಷ್ಣ ಏನು, ಆತನ ಎತ್ತರ ಬಿತ್ತರಗಳೇನು? ಹಣಕಿ ನೋಡಲಾದರೂ ಸಾಧ್ಯವೇ? ಕೇವಲ ಪ್ರಶ್ನೆಗಳಷ್ಟೇ ಮನದಲ್ಲಿ.... ಉತ್ತರ ಎಲ್ಲಿದೆ??
ಆದಿಯೆಲ್ಲಿ... ಅಂತ್ಯವೆಲ್ಲಿ??
ಕೃಷ್ಣ ದೇವತಾ ಅಂಶವೆಂದೇನೋ ಸರಿಯಾದುದೇ,, ಒಪ್ಪಿಕೊಳ್ಳತಕ್ಕದ್ದೇ.. ಆದರೆ ಆತನನ್ನು ದೇವರೆಂದು ಒಂದಷ್ಟು ದೂರದಲ್ಲಿರಿಸಿ ಪೂಜಿಸಲು ಸಾಧ್ಯವೆ? ಕಷ್ಟ ಸಾಧ್ಯವೆಂಬ ಭಾವನೆ ನನ್ನದು. ಆತನನ್ನು ಆರಾಧಿಸಬಹುದು, ಪ್ರೀತಿಸಬಹುದು, ಅಭಿಮಾನಗೊಳ್ಳಬಹುದು, ಪೂಜಿಸಲು.... ಉಹುಂ ಖಂಡಿತಾ ಸಾಧ್ಯವಿಲ್ಲ.


ಬಾಲಕೃಷ್ಣನಿಗೆ ಮಮತಾಮಯಿಯಾದ ತಾಯಿಯಾಗಬಹುದು, ಬೆಣ್ಣೆಕಳ್ಳನಿಗೆ ರಕ್ಷಿಸುವ ಸಹೋದರಿಯಾಗಬಹುದು, ಗೋಪಾಲನ ಸಖಿಯಾಗಬಹುದು, ಮುರಳೀ ಮೋಹನನ ಪ್ರಿಯತಮೆಯಾಗಬಹುದು. ಶ್ರೀಕೃಷ್ಣನ ಸಹಚಾರಿಣಿಯಾಗಬಹುದು. ಪ್ರೌಢ ಕೃಷ್ಣನಿಗೆ ಮಗಳೂ ಆಗಬಹುದು. ಆತನೆಲ್ಲಾ ಬೆಳವಣಿಗೆಗಳೊಂದಿಗೆ ಆತನ ಬಗೆಗಿನ ಭಾವನೆಯನ್ನೋ ಅಥವಾ ನಮ್ಮನ್ನೋ ಬದಲಾಯಿಸಿಕೊಂಡು ಆತನ ಆತ್ಮೀಯತೆಯನ್ನು ಅನುಭವಿಸುತ್ತಾ ಸಂತೋಷಿಸಬಹುದು.ಮುದ್ದು ಕೃಷ್ಣನನ್ನು ಅವನು ಪುಟ್ಟವನು, ಅವನ ರಕ್ಷಣೆ ನನ್ನಿಂದಲೇ ಸಾಧ್ಯ ಎಂಬ ಭಾವನೆಯಷ್ಟೇ ಬರುವುದು. ಅಯ್ಯೋ ಕೃಷ್ಣ!! ಕಾಪಾಡೂ.... ಎಂಬ ಮೊರೆ ಆರ್ತನಾದ ಖಂಡಿತಾ ಬರಲಾರದೇನೋ.


ಕೃಷ್ಣ ಎಂಬ ಹೆಸರಿನ ಮೂಲ ಅರ್ಥವೇ ಆಕರ್ಷಣೆ ಎಂಬುದು.ಆದ್ದರಿಂದ ಸಹಜವಾಗಿಯೇ ಆತನತ್ತ ಪ್ರತಿಯೊಬ್ಬರೂ ಆಕರ್ಷಿಸಲ್ಪಡುವುದರಲ್ಲಿ ಆಶ್ಚರ್ಯವೇನೂ ಇಲ್ಲವಲ್ಲ.?
ಇನ್ನೊಂದು ಅರ್ಥದಲ್ಲಿ ಕೃಷ್ಣ ಎಂದರೆ ’ಪ್ರೀತಿ’. ಪ್ರೀತಿಯ ಹಂಬಲ ಇಲ್ಲದಿರುವುದಾದರೂ ಯಾರಲ್ಲಿ?? ಪ್ರೀತಿಯ ಇನ್ನೊಂದು ರೂಪವೇ ಕೃಷ್ಣ. 
ಯೋಚಿಸಿದಷ್ಟೂ ಕೃಷ್ಣ ಆತ್ಮೀಯನಾಗುತ್ತಾನೆ. ಹಾಯ್ ಕೃಷ್ಣ!! ಎಂಬೊಂದು ಉದ್ಗಾರ ದಿನದ ಕೊನೆಯಲ್ಲಿ ಆಯಾಸವನ್ನೆಲ್ಲಾ ಕಳೆದು ಉಲ್ಲಾಸವನ್ನು ಸೃಷ್ಟಿಸುತ್ತದೆ. ಪ್ರೀತಿಯ ಮತ್ತೊಂದು ಮುಖದಲ್ಲಿ ಇರುವುದು ಕೇವಲ ಕೃಷ್ಣ. ಪ್ರೀತಿಯಾ ಕರೆ.. ಕೊಳಲಿನಾ ಕರೆ... ಸುಂದರ ಮುಗ್ಧ ಪ್ರಪಂಚವೊಂದು ಕೃಷ್ಣನೊಂದಿಗೆ ತೆರೆದುಕೊಳ್ಳುತ್ತದೆ.


ಪ್ರಶ್ನಿಸು... ಕೇವಲ ಕೃಷ್ಣನಲ್ಲಿ ಪ್ರಶ್ನಿಸು. ಉತ್ತರ ನೀಡುವವನು ಆತ ಮಾತ್ರ. ನಮ್ಮೆಲ್ಲಾ ಸಂದೇಹಗಳ ಉತ್ತರ ಕೃಷ್ಣ ಮಾತ್ರ. 


ಕೃಷ್ಣನಿದ್ದಲ್ಲಿ ರಾಧೆ. ಆತನಿದ್ದಲ್ಲಿ ಪ್ರೀತಿ, ಅಲ್ಲೇ ಕೊಳಲಿನ ಮೃದು ಮಧುರ ಗಾನ. ಅರೇ ಅಲ್ಲೇ ಗೋವಿನ ಅಂಬಾ ನಾದ, ಅದರ ಕೊರಳಿನ ಗೆಜ್ಜೆಯ ಸುಂದರ ನಾದವೂ ಕೇಳುತ್ತದಲ್ಲವೇ..


ಕೃಷ್ಣ ಪ್ರೀತಿಯ ಈ ಬರಹದೊಂದಿಗೆ ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

August 16, 2011

ನಲ್ಲೆಗೆ -

ನನ್ನ ಹೃದಯದಾಳದಲ್ಲಿ
ಅವಿತಿದ್ದೆ ನೀ
ನನ್ನೊಳಗೆ ಪ್ರವಹಿಸುತ್ತಿರುವೆ ಈಗ
ಸಣ್ಣ ನದಿಯಂತೆ
ನನ್ನ ಪ್ರೀತಿಸಬಲ್ಲೆಯಾ
ನನ್ನ ನಲ್ಲೆ ನೀ


ನಿನ್ನ ನಗು ನನಗೆ
ಜೀವಾಮೃತ
ನನ್ನ ಮುದ್ದು ನಿನಗೆ
ಶಕ್ತಿಮದ್ದು
ನಿನ್ನ ಮಾತು ನನಗೆ
ಸಿಹಿ ಜೇನು


ಬೇಡುವೆ ಆ ದೇವನಲಿ ನಾ
ನಿನ್ನ ಕಣ್ಣೀರ ನನಗೆ ನೀಡೆಂದು
ನನ್ನೆಲ್ಲಾ ನಗು
ನಿನ್ನ ನಗುವಿನೊಡನೆ ಸೇರಿ ದ್ವಿಗುಣವಾಗಲೆಂದು
ನಿನ್ನ ಸಂತೊಷ ಚಿರನೂತನವಾಗಿರಲೆಂದು

August 08, 2011

ಗೆಳೆಯನಿಗೆ -ಏಕಾಂಗಿಯಾಗಿ ಕತ್ತಲೆಯೊಳಗಿದ್ದೆ ನಾ
ನೀ ಬಂದೆ ಮಿಂಚಂತೆ
ನಿನ್ನ ಸ್ನೇಹದ ಮಳೆಯಲಿ
ತೋಯಿಸಿದೆ ನನ್ನ

ಸ್ವಾರ್ಥಿ ಗೆಳೆಯರಿಂದ ಮನ
ರೋಸಿತ್ತು ಗೆಳೆಯಾ
ನಿನ್ನ ನಿಷ್ಕಲ್ಮಷ ಪ್ರೀತಿಯಿಂದ
ಮರೆಸಿದೆ ಎಲ್ಲಾ ನೋವ

ನಿನ್ನ ತಾಜಾ ಪ್ರೀತಿ, ಸ್ನೇಹ
ನನ್ನೊಂದಿಗಿರಲಿ ಗೆಳೆಯಾ

ನನಗರಿವಿರದಂತೆ ಇದ್ದೆ ನೀ ಜೊತೆಯಲಿ
ಈಗಿರುವೆ ನನ್ನ ಜೊತೆಯಲಿ
ಮುಂದೆಂದೂ ನನ್ನ ಬಾಳಲಿ ನಿನ್ನ ಸ್ನೇಹವಿರಲಿ
ಜೊತೆಯಿರಲಿ ಗೆಳೆಯಾ...