July 13, 2011

ಸ್ವಗತ - 2

ಹಲವು ವರುಷಗಳ ಬಳಿಕ ಹೇಗೋ ನನ್ನ ಇರುವನ್ನು ಪತ್ತೆ ಹಚ್ಚಿ ನನ್ನ ಬಳಿ ಏಕೆ ಬಂದೆ ಗೆಳತೀ? ನನ್ನನ್ನು ದುರ್ಬಲನನ್ನಾಗಿಸುತ್ತಿರುವೆ.


ಪುರೂ, ಮದುವೆಯಾದ ಮೇಲಾದರೂ ನನಗೆ ನೆಮ್ಮದಿಯ ಬಾಳು ಸಿಗಬಹುದೆಂದು ಬಯಸಿದ್ದೆ. ಆದರೆ ಸದಾ ಸಂಶಯಿತ ಗಂಡ.ಮತ್ತೆ ಕಳೆದು ಹೋಗುತ್ತಿರುವೆ. ಗಂಡ-ಮಗು-ಅತ್ತೆ-ಮಾವ ಹೀಗೆ ಸಂಬಂಧಗಳ ಸುಳಿಯಲ್ಲಿ ಸಿಕ್ಕು ನನ್ನೆಲ್ಲಾ ಹವ್ಯಾಸ, ಆಸಕ್ತಿಗಳನ್ನು ಕಳಕೊಂಡಿದ್ದೇನೆ. ಪ್ರತಿಯೊಂದಕ್ಕೂ ಸಿಟ್ಟು, ಆರೋಗ್ಯವೂ ಕೈ ಕೊಡುತ್ತಿದೆ ಪುರೂ.... ಎಂದು ನೋಡಿದಾಕ್ಷಣ ಹೇಳಿಕೊಂಡಿದ್ದೆ.
ಆಗಲೂ ನನ್ನ ಹೃದಯ ಬಿಚ್ಚಿಡಲು ಮನಸ್ಸಾಗಲಿಲ್ಲ. ಆದರೆ ನಿನ್ನ ಕಂಗಳ ಕಾಂತಿ ಸೊರಗಿರುವುದ ನೋಡಿದೆ.


ಮರುದಿನವೇ ನನ್ನ ’In-Box’ ನಲ್ಲೊಂದು ಸಂದೇಶ - "ಪುರೂ ನಿನ್ನ ನೋಡಿದ ಮೇಲೆ ನನ್ನಲ್ಲೇನೋ ತಲ್ಲಣ. ನಿನ್ನ ಪ್ರಥಮ ಬಾರಿ ನೋಡಿದ್ದಾಗ ಉಂಟಾಗಿದ್ದ ತಲ್ಲಣ. ಈಗಲೂ ನಾನು ಹೇಳದೇ ಹೋದರೆ ಬದುಕು ಪೂರ್ತಿ ಕೊರಗುವೆ."


ಮನೂ, ನಿನ್ನ ತಲ್ಲಣ ನನಗರ್ಥವಾಗಿತ್ತು. ನಿನ್ನ ಬಾಳಲ್ಲಿ ಒಬ್ಬನಿದ್ದಾನೆಂದು ನಾನಂದು ಹೇಳಿರಲಿಲ್ಲ. ನನ್ನ ಗೆಳತಿಯ ಬಗ್ಗೆ ಬಲ್ಲ ನೀನು ನಿನ್ನ ಮನ ಬಿಚ್ಚಿರಲಿಲ್ಲ.


 ಇಂದು ನಮ್ಮಿಬ್ಬರಿಗೂ ಸಂಸಾರವಿದೆ. ಇಬ್ಬರೂ ಹೊರಬಂದು ಹೊಸ ಬಾಳು ಕಟ್ಟುವ ಧೈರ್ಯ ನನ್ನಲ್ಲಿಲ್ಲಿ. ಇನ್ನಿಬ್ಬರ ಬದುಕ ಗೋರಿಯ ಮೇಲೆ ನಾವು ಸಂಸಾರ ಹೂಡಿದರೂ ಅದು ಸುಖಮಯವಾಗಿರದು ಮನೂ...


ಕ್ಷಮಿಸು ಮನೂ...ನಿನ್ನಲ್ಲೊಂದು ಮಾತೂ ಹೇಳಲಾರದವನಾಗಿದ್ದೇನೆ.ನಿನ್ನ ಕರೆಗಳಿಗೆ, ನಿನ್ನ ಸಂದೇಶಗಳಿಗೆ ಕಿವುಡನಾಗಿರುವೆ. ನೀನು ನಿನ್ನ ಸಂಸಾರವನ್ನು ಇಂದಲ್ಲ ನಾಳೆ ಸರಿಪಡಿಸಿಕೊಳ್ಳುತ್ತೀಯ ಎಂಬ ಭರವಸೆ ನನಗಿದೆ ಗೆಳತಿ. ನನ್ನ ಸಂಪರ್ಕಿಸಲು ಪ್ರಯತ್ನಿಸದಿರು..ಒಬ್ಬರನ್ನೊಬ್ಬರು ನೋಡುತ್ತಿದ್ದರೆ ತೀರಾ ದುರ್ಬಲರಾಗುತ್ತೇವೆ.


ನೀನು ನನಗೆ ಕೇವಲ ಗೆಳತಿ ಎಂದರೆ ನನ್ನ ಮನ ಒಪ್ಪದು ಗೆಳತೀ...ಪ್ರೇಯಸಿ ಎಂದರೆ ನಮ್ಮ ಸಂಬಂಧದ ಪವಿತ್ರತೆಗೆ ಅನ್ಯಾಯವೆಸಗಿದಂತೆ..ನೀನು ಸದಾ ನನ್ನ ಆತ್ಮ ಸಂಗಾತಿ. ನಿನ್ನಾತ್ಮದ ಕರೆ ನನಗೆ ತಲುಪಬಲ್ಲದು ಮನೂ... ನನ್ನಾತ್ಮದ ಮಾತು ನಿನ್ನೆದೆಯ ವೀಣೆ ಮೀಟಬಲ್ಲುದು ಗೆಳತಿ...


ಭೂಮಿ ಗುಂಡಗಿದೆ... ನಿನ್ನ ಬಾಳು ನೇರ್ಪಾದ ಮೇಲೆ ಸಾಧ್ಯವಾದರೆ ಭೇಟಿಯಾಗೋಣ.
ಕಥೆ ಬರೆಯುವ ಮೊದಲ ಪ್ರಯತ್ನ. ಹೇಗನ್ನಿಸಿತು ತಿಳಿಸಿ.

July 11, 2011

ಸ್ವಗತ -1

     ಸುಂದರ ಕಣ್ಣುಗಳು ನನ್ನನ್ನು ಸದಾ ಕಾಡುತ್ತವೆ. ಆ ಜೋಡಿ ಕಂಗಳನ್ನು ಜೀವನ ಪೂರ್ತಿ ನೋಡುತ್ತಾ ಇರಬಯಸಿದ್ದೆ. ಇಲ್ಲಿಯವರೆಗೆ ನೋಡಿದ ಯಾವ ಕಣ್ಣುಗಳೂ ನನ್ನನ್ನಿಷ್ಟು ಕಾಡಿರಲಿಲ್ಲ. ನೀನು ನನ್ನನ್ನು ಹಗಲು ರಾತ್ರಿಗಳಲ್ಲಿ ಕಾಡಿದ್ದೆ.


 ನನ್ನ ನಿನ್ನ ಭೇಟಿ ಕೇವಲ ನಾಲ್ಕು ದಿನಗಳದಾಗಿತ್ತು. ಆ ನಾಲ್ಕು ದಿನಗಳಲ್ಲಿ ನಿನ್ನ ಸಮಯವನ್ನು ನನಗಾಗಿ ಮೀಸಲಿಟ್ಟಿದ್ದೆ. ನನ್ನ ಮಾತುಗಳಿಗೆ ನೀನು ಕಿವಿಯಾಗಿದ್ದೆ. ನಿನ್ನನ್ನು ನೋಡುತ್ತಿದ್ದರೆ ಮಾತನಾಡುವ ಸ್ಪೂರ್ತಿ ಉಕ್ಕುತ್ತಿತ್ತು. ತುಂಬಾ ಮುಗ್ಧೆ ನೀನು. ನನ್ನಲ್ಲಿ ತುಂಬು ಗೌರವ ನಿನಗಿತ್ತು. ಆ ಗೌರವವನ್ನು ಉಳಿಸಿಕೊಳ್ಳಲು ನಾನು ಹೆಣಗುತ್ತಿದ್ದದ್ದು ನಿನಗೆ ಗೊತ್ತಾಗಿತ್ತೇ ಮನಸ್ವಿ......


  ನನ್ನ ಬಾಳಲ್ಲೂ ಹಲವು ಗೆಳತಿಯರಿದ್ದರು. ಅಷ್ಟೇಕೆ ನಿನ್ನನ್ನು ಭೇಟಿಯಾದಾಗಲೂ ನನಗೊಬ್ಬ ಗೆಳತಿಯಿದ್ದಳು. ಅದು ನಿನಗೂ ತಿಳಿದಿತ್ತು. ಆದರೆ................ ನಿನ್ನನ್ನು ನೋಡಿದಾಗ ಅದೆಷ್ಟೊ ಜನುಮಗಳಿಂದ ನಿನ್ನ ಕಂಗಳು ನನ್ನೊಂದಿಗಿದ್ದವೆಂಬ ಭಾವ ಸ್ಪುರಿಸಿತ್ತು.


ಅದೊಂದು ದಿನ ನೀನು ಹೇಳಿದ್ದೆ.... "ಪುರೂ ನಾನು ಕಾಣುವಷ್ಟು ಸಂತಸ ನನ್ನ ಬಾಳಲ್ಲಿ ಇಲ್ಲ. ಇಲ್ಲದ ಸಂತೋಷವನ್ನು ನನ್ನ ಮುಖದ ಮೇಲೇರಿಸಿಕೊಂಡು ಬಾಳುತ್ತಿರುವೆ. ಹೆಣ್ಣೆಂದು ಹೀಗಳೆಯುವ ಹೆತ್ತವರು. ಯಾರ ಪ್ರೀತಿಯೂ ಸಿಕ್ಕದ ನತದೃಷ್ಟೆ ನಾನು. ನಿಜವಾದ ಸ್ನೇಹವೂ ನನ್ನಿಂದ ಮೈಲಿ ದೂರ. ಇದರ ಮಧ್ಯೆ ಪ್ರೀತಿಯ ಸುಳಿಯಲ್ಲಿ ಸಿಕ್ಕಿರುವೆ. ಆತನಿಂದ ಹೊರಬರಲಾರದಷ್ಟು ದೂರ ತಲುಪಿರುವೆ. ಮನೆಯಲ್ಲಿ ಒಪ್ಪುವ ಭರವಸೆ ಇಲ್ಲ. ಹೊರಬರುವ ಧೈರ್ಯವಿಲ್ಲ. ತುಂಬಾ ದ್ವಂದ್ವದಲ್ಲಿರುವೆ."
ಅಂದೇ ನಾನು ನಿನ್ನಲ್ಲಿ ಸ್ನೇಹ ಹಸ್ತ ಚಾಚಿದ್ದೆ. ನೀ ನನ್ನ ತೆಕ್ಕೆ ಬಿದ್ದಿದ್ದೆ. ನಿನ್ನೆಲ್ಲಾ ಸಮಸ್ಯೆಗಳಿಗೆ ನಾನು ಉತ್ತರವಾಗಿದ್ದೆ.


ನಿನ್ನ ಬಾಳ ಕಥೆ ಕೇಳಿದ ಮೇಲೆ ನನ್ನ ಪ್ರೀತಿಯ ನಿವೇದಿಸುವ ಧೈರ್ಯ ನನ್ನಲ್ಲಿರಲಿಲ್ಲ ಕಣೇ.... ನಿನ್ನ ಬಾಳನ್ನು ಇನ್ನೂ ಗೋಜಲುಗೊಳಿಸುವ ಮನವಾಗಲಿಲ್ಲ.


ನಾಲ್ಕೇ ನಾಲಕ್ಕು ದಿನಗಳಲ್ಲಿ ನಿನ್ನ ವ್ಯಕ್ತಿತ್ವ ಪರಿಚಯ ನನಗಾಗಿತ್ತು. ನಾನು ಕಲಿತ ಮನಃಶಾಸ್ತ್ರ ನಿನ್ನನ್ನರಿಯಲು ಸಹಕರಿಸಿತ್ತು. ನೀನೊಂದು ತೆರೆದ ಪುಸ್ತಕವಾಗಿದ್ದೆ. ನಿನ್ನೊಡನಾಟದ ಕ್ಷಣಗಳು ನನ್ನ ಬದುಕಿಗೆ ಹೊಸ ಹುರುಪನ್ನು ಕೊಟ್ಟಿತ್ತು.
will be continued in next post...