May 16, 2011

ಮಲೆಂಗಲ್ಲು!!!


ಎತ್ತರವಾದ ಕಲ್ಲು ಹಾಸಿನ ಬೆಟ್ಟ... ಮೇಲೊಂದು ಚಿಕ್ಕ ಚೊಕ್ಕ ಉಮಾಮಹೇಶ್ವರ ದೇವರ ಸ್ಥಾನ... ಸುತ್ತೆಲ್ಲಾ ಹಸಿರ ಸಿರಿ... ಕಣ್ಣು ಹಾಯಿಸಿದಲ್ಲೆಲ್ಲಾ ದೂರದ ಬೆಟ್ಟಗುಡ್ಡಗಳು  - ಅವನ್ನು ಚುಂಬಿಸಬಯಸುವ ನೀಲಾಕಾಶ....
ವಾವ್... ಅಲ್ಲವೇ??? ಯಾವುದೋ ಪ್ರಸಿದ್ದ ಪ್ರವಾಸೀ ಸ್ಥಳದ ಬಗ್ಗೆ ಹೇಳುತ್ತಿದ್ದೇನೆ ಅಂದುಕೊಂಡಿರಾ??? ಖಂಡಿತಾ ಇಲ್ಲ... ಪ್ರಪಂಚಕ್ಕೆ ತಿಳಿಯದಿರುವ, ಕೇವಲ ಸುತ್ತಮುತ್ತಲಿನ ಜನ ತಿಳಿದಿರುವ ಮಲೆಂಗಲ್ಲು ಎಂಬೋ ಜಾಗದ ಬಗ್ಗೆ ನಾನೀಗ ಹೇಳ ಹೊರಟಿರುವೆ... 
ಧರ್ಮಸ್ಥಳದಿಂದ ಉಪ್ಪಿನಂಗಡಿಗೆ ಹೋಗುವ ಮಾರ್ಗದಲ್ಲಿ ಕುಪ್ಪೆಟ್ಟಿ ಇದೆ. ಇಲ್ಲಿಂದ ಎಡಕ್ಕೆ ಸುಮಾರು ೭ ಕಿ.ಮೀ. ಗಳ ದೂರದಲ್ಲಿರುವುದು ಪದ್ಮುಂಜ ಅಲ್ಲಿಗೆ ಹೋಗುವ ರಸ್ತೆಯಲ್ಲಿ ಬಲಕ್ಕೆ ಉಮಾಮಹೇಶ್ವರ ದೇವಸ್ಥಾನ ಎಂದು ಬರೆದಿರುವ ಸಣ್ಣ ಮಾರ್ಗ ಸೂಚಿ ಇದೆ. ಅಲ್ಲಿ ಮೇಲೆ ಹತ್ತಿಕೊಂಡು ಹೋದರೆ ಕಾಣುವ ದೃಶ್ಯ ನಯನ ಮನೋಹರ.
ಸಂಜೆಯ ಸಮಯದಲ್ಲಿ ಅಲ್ಲಿ ಮನುಷ್ಯ ಸಂಚಾರವಿಲ್ಲ. ಪ್ರಕೃತಿಯೊಂದಿಗೆ ತಾದಾತ್ಮ್ಯ ಸಾಧ್ಯವಾಗುವ ಜಾಗ.
ಬೆಟ್ಟದ ಮೇಲಿನ ಸೂರ್ಯಾಸ್ತವನ್ನು ಯಾವುದೇ ಗಲಾಟೆ ಗದ್ದಲಗಳಿಲ್ಲದೆ ನೋಡಬಹುದು.
ಎಲ್ಲಕ್ಕಿಂತ ಮುಖ್ಯವಾಗಿ ಇದು ಮನುಷ್ಯನ ಕ್ರೂರ ದೃಷ್ಟಿ ಬೀಳದಿರುವ ಸ್ಥಳ. 

ಹೊರಸುತ್ತಿನ ಪೌಳಿಯಿಂದ ನೋಡಿದ ಸೂರ್ಯಾಸ್ತ ಮರೆಯಲಸಾಧ್ಯ.

ಈಲ್ಲಿನ ಸ್ಥಳ ಪುರಾಣದ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ಗರ್ಭಗುಡಿಯ ಹೊರಭಾಗದಲ್ಲಿ ಹಾಕಿದ ಫಲಕ ಹೇಳುತ್ತದೆ:

ಬೆಳಗಿನ ಹೊತ್ತು ದೇವರಿಗೆ ಪೂಜೆ ನಡೆಯುತ್ತದೆ. ಉಮಾಮಹೇಶ್ವರ ವಿಗ್ರಹವಿರುವ ಅಪರೂಪದ ದೇವಸ್ಥಾನ.


ವರುಷಕ್ಕಾಗುವಷ್ಟು ಹಸಿರನ್ನು ಕಣ್ಣ ತುಂಬಿಸಿ ಹೊರಡಲು ಮುಷ್ಕರ ಹೂಡುತ್ತಿದ್ದ ಮನಸ್ಸಿನೊಂದಿಗೆ ಹೊರಟೆ.

ಕುಪ್ಪಳಿ

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ....

ಕುವೆಂಪು ರವರೇ ನಿಂತು ಸ್ವಾಗತಿಸುತ್ತಿದ್ದರೇನೋ ಎಂದೊಮ್ಮೆ ಅನಿಸಿದ್ದು ಸುಳ್ಳಲ್ಲ..

ಶಿವಮೊಗ್ಗೆಯಿಂದ ೮೦ ಕಿ.ಮೀ ದೂರದಲ್ಲಿರುವ ಕವಿ ಮನೆ ಕುಪ್ಪಳಿಗೆ ಭೇಟಿ ನೀಡುವ ಆಸೆ ಎಂದೋ ಇತ್ತು. ಅದು ವಿಶ್ವ ಅಮ್ಮಂದಿರ ದಿನದಂದು ಪೂರೈಸಿತು.

ಕುವೆಂಪು ಬೆಳೆದ ಕುಪ್ಪಳಿ, ಅವರ ಕಾದಂಬರಿಯಲ್ಲಿ ಚಿತ್ರಿತವಾದ ಮಲೆನಾಡು ನೋಡಿ ಸಂತಸವಾಯ್ತು.
ಕುವೆಂಪುರವರ ಊರಿನ ಚಿತ್ರಣವನ್ನು ಅವರ ಕವನದಲ್ಲಿ ಓದುವುದೇ ಸರಿ -
"ತೀರ್ಥಹಳ್ಳಿ ಯ ಕಳೆದು ತಾಯಿ ತುಂಗೆಯದಾಟಿ
ಒಂಬತ್ತು ಮೈಲಿಗಳ ದೂರದಲಿ ನಮ್ಮೂರು
ಊರೆಂದರೊಂದೆ ಮನೆ. ಪಡುವೆಟ್ಟುಗಳ ನಾಡು
ದಟ್ಟವಾದಡವಿಗಳು ಕಿಕ್ಕಿರಿದ ಮಲೆನಾಡು
ಸುತ್ತಲೂ ಎತ್ತರವಾದ ಬೆತ್ತಗಳು, ಕಾಡುಗಳು
ಎತ್ತ ನೋಡಿದರತ್ತ ಸಿರಿಹಸಿರು....."


ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನದವರು ನವೀಕರಿಸಿದ ಕುವೆಂಪು ಪೂರ್ವಜರ ಚೆಂದದ ತೊಟ್ಟಿಮನೆ. ಅವರ ಕಾಲದಲ್ಲಿ ಬಳಕೆಯಾದ ವಸ್ತುಗಳ ಸಂಗ್ರಹಾಲಯ ಕುಪ್ಪಳಿಯಲ್ಲಿ ಇದೆ.

ಮನೇ ಮನೇ ಮುದ್ದು ಮನೆ

ಮನೇ ಮನೇ ನನ್ನ ಮನೆ

ಎಂದು ಕುವೆಂಪುರವರಿಗೆ ಹಲವು ಕವನಗಳಿಗೆ, ಮಲೆಗಳಲ್ಲಿ ಮದುಮಗಳು ಹಾಗೂ ಕಾನೂರ ಹೆಗ್ಗಡತಿಯಂತಹ ಮಹಾ ಕಾದಂಬರಿಗಳಿಗೆ ಸ್ಪೂರ್ತಿಯ ಸೆಲೆಯನಿತ್ತ ಮನೆಯ ಭೇಟಿ ಮೈ ರೋಮಾಂಚನಗೊಳಿಸಿತು.

ಹಳೆಯ ವಸ್ತುಗಳು,ಕುವೆಂಪುರವರಿಗೆ ಬಂದ ಪ್ರಶಸ್ತಿಗಳು, ಅವರ ಪುಸ್ತಕಗಳು, ಕುವೆಂಪುರವರು ಬಳಸುತ್ತಿದ್ದ ಕೆಲವು ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ.ಕುವೆಂಪುರವರ ಗುಂಗುರು ಕೂದಲನ್ನೂ ಜೋಪಾನ ಮಾಡಿದ್ದರೆ. ಅದನ್ನು ನೋಡುವಾಗ ಭಾವಪರವಶಳಾಗಿದ್ದು ಸುಳ್ಳಲ್ಲ.

ಕವಿ ಮನೆಯಲ್ಲಿ ಉದಯರವಿ ಪ್ರಕಾಶನದ ಪುಸ್ತಕಗಳನ್ನು ಶೇಕಡಾ ೧೦ ರ ರಿಯಾಯತಿ ದರದಲ್ಲಿ ಮಾರಾಟಕ್ಕೆ ಇಡಲಾಗಿದೆ. ಅಲ್ಲಿ ತಾರಿಣಿ ಚಿದಾನಂದ ಬರೆದ 'ಮಗಳು ಕಂಡ ಕುವೆಂಪು' ಪುಸ್ತಕವನ್ನು ಖರೀದಿಸಿದೆ - ಇದರ ಬಗ್ಗೆ ಇನ್ನೊಮ್ಮೆ ಬರೆಯುವೆ.

ಕವಿ ಮನೆಗೆ ಸಮೀಪದಲ್ಲಿ ಕವಿಶೈಲವಿದೆ. ಎಂತಹ ಕಲ್ಲು ಹೃದಯಿಗೂ ಭಾವ ಒಸರುವ ರಮ್ಯ ತಾಣ. ಶಬ್ದಗಳಲ್ಲಿ ವಿವರಿಸಲು ಅಸಾಧ್ಯ. 


ಕವಿ ಹೇಳುತ್ತಾರೆ: "ಪ್ರಕೃತಿ ದೇವಿಯ ಸೊಬಗು ದೇಗುಲದಿ ಆನಂದವೇ ಪೂಜೆ ; ಮೌನವೇ ಮಹಾ ಸ್ತೋತ್ರ!"
ಖಂಡಿತಾ... ಮಾತಿಗಲ್ಲಿ ಅವಕಾಶವೇ ಇಲ್ಲ....


ಕುವೆಂಪುರವರ ಕಾಲಾನಂತರದಲ್ಲಿ ನಿಲ್ಲಿಸಲಾದ ಬ್ರಹತ್ ಕಲ್ಲುಗಳು:
ಹಲವುಸಲ ಕಣ್ಣಾರೆ ನೋಡಬೇಕೆಂದಿದ್ದ, ಕುವೆಂಪು ಹಾಗೂ ಅವರ ಸ್ನೇಹಿತರು ಕಲ್ಲಿನಲ್ಲಿ ಬರೆದಿರುವುದು:


೯೦ ವರ್ಷಗಳ ತುಂಬು ಬಾಳನ್ನು ಬಾಳಿದ, ವಿಶ್ವ ಮಾನವ ಸಂದೇಶವನ್ನಿತ್ತ ಕನ್ನಡಿಗರ ಹೆಮ್ಮೆಯ ಅನಿಕೇತನ ಕವಿ ಕುವೆಂಪುವಿಗಿದೋ ನಮನ.