August 21, 2011

ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು


ಶ್ಯಾಮ ವರ್ಣ, ನವಿಲುಗರಿ, ಕೊಳಲು, ಅಂಬಾ ಅನ್ನುವ ಗೋವಿನ ಹಿಂಡು, ರಾಧೆ, ಗೋಪಿಕೆಯರು, ವೃಂದಾವನ ಇಷ್ಟರಲ್ಲೇ ಕೃಷ್ಣ ಪೂರ್ತಿಯಾಗುವನೇ? ಕೃಷ್ಣ ಏನು, ಆತನ ಎತ್ತರ ಬಿತ್ತರಗಳೇನು? ಹಣಕಿ ನೋಡಲಾದರೂ ಸಾಧ್ಯವೇ? ಕೇವಲ ಪ್ರಶ್ನೆಗಳಷ್ಟೇ ಮನದಲ್ಲಿ.... ಉತ್ತರ ಎಲ್ಲಿದೆ??
ಆದಿಯೆಲ್ಲಿ... ಅಂತ್ಯವೆಲ್ಲಿ??
ಕೃಷ್ಣ ದೇವತಾ ಅಂಶವೆಂದೇನೋ ಸರಿಯಾದುದೇ,, ಒಪ್ಪಿಕೊಳ್ಳತಕ್ಕದ್ದೇ.. ಆದರೆ ಆತನನ್ನು ದೇವರೆಂದು ಒಂದಷ್ಟು ದೂರದಲ್ಲಿರಿಸಿ ಪೂಜಿಸಲು ಸಾಧ್ಯವೆ? ಕಷ್ಟ ಸಾಧ್ಯವೆಂಬ ಭಾವನೆ ನನ್ನದು. ಆತನನ್ನು ಆರಾಧಿಸಬಹುದು, ಪ್ರೀತಿಸಬಹುದು, ಅಭಿಮಾನಗೊಳ್ಳಬಹುದು, ಪೂಜಿಸಲು.... ಉಹುಂ ಖಂಡಿತಾ ಸಾಧ್ಯವಿಲ್ಲ.


ಬಾಲಕೃಷ್ಣನಿಗೆ ಮಮತಾಮಯಿಯಾದ ತಾಯಿಯಾಗಬಹುದು, ಬೆಣ್ಣೆಕಳ್ಳನಿಗೆ ರಕ್ಷಿಸುವ ಸಹೋದರಿಯಾಗಬಹುದು, ಗೋಪಾಲನ ಸಖಿಯಾಗಬಹುದು, ಮುರಳೀ ಮೋಹನನ ಪ್ರಿಯತಮೆಯಾಗಬಹುದು. ಶ್ರೀಕೃಷ್ಣನ ಸಹಚಾರಿಣಿಯಾಗಬಹುದು. ಪ್ರೌಢ ಕೃಷ್ಣನಿಗೆ ಮಗಳೂ ಆಗಬಹುದು. ಆತನೆಲ್ಲಾ ಬೆಳವಣಿಗೆಗಳೊಂದಿಗೆ ಆತನ ಬಗೆಗಿನ ಭಾವನೆಯನ್ನೋ ಅಥವಾ ನಮ್ಮನ್ನೋ ಬದಲಾಯಿಸಿಕೊಂಡು ಆತನ ಆತ್ಮೀಯತೆಯನ್ನು ಅನುಭವಿಸುತ್ತಾ ಸಂತೋಷಿಸಬಹುದು.ಮುದ್ದು ಕೃಷ್ಣನನ್ನು ಅವನು ಪುಟ್ಟವನು, ಅವನ ರಕ್ಷಣೆ ನನ್ನಿಂದಲೇ ಸಾಧ್ಯ ಎಂಬ ಭಾವನೆಯಷ್ಟೇ ಬರುವುದು. ಅಯ್ಯೋ ಕೃಷ್ಣ!! ಕಾಪಾಡೂ.... ಎಂಬ ಮೊರೆ ಆರ್ತನಾದ ಖಂಡಿತಾ ಬರಲಾರದೇನೋ.


ಕೃಷ್ಣ ಎಂಬ ಹೆಸರಿನ ಮೂಲ ಅರ್ಥವೇ ಆಕರ್ಷಣೆ ಎಂಬುದು.ಆದ್ದರಿಂದ ಸಹಜವಾಗಿಯೇ ಆತನತ್ತ ಪ್ರತಿಯೊಬ್ಬರೂ ಆಕರ್ಷಿಸಲ್ಪಡುವುದರಲ್ಲಿ ಆಶ್ಚರ್ಯವೇನೂ ಇಲ್ಲವಲ್ಲ.?
ಇನ್ನೊಂದು ಅರ್ಥದಲ್ಲಿ ಕೃಷ್ಣ ಎಂದರೆ ’ಪ್ರೀತಿ’. ಪ್ರೀತಿಯ ಹಂಬಲ ಇಲ್ಲದಿರುವುದಾದರೂ ಯಾರಲ್ಲಿ?? ಪ್ರೀತಿಯ ಇನ್ನೊಂದು ರೂಪವೇ ಕೃಷ್ಣ. 
ಯೋಚಿಸಿದಷ್ಟೂ ಕೃಷ್ಣ ಆತ್ಮೀಯನಾಗುತ್ತಾನೆ. ಹಾಯ್ ಕೃಷ್ಣ!! ಎಂಬೊಂದು ಉದ್ಗಾರ ದಿನದ ಕೊನೆಯಲ್ಲಿ ಆಯಾಸವನ್ನೆಲ್ಲಾ ಕಳೆದು ಉಲ್ಲಾಸವನ್ನು ಸೃಷ್ಟಿಸುತ್ತದೆ. ಪ್ರೀತಿಯ ಮತ್ತೊಂದು ಮುಖದಲ್ಲಿ ಇರುವುದು ಕೇವಲ ಕೃಷ್ಣ. ಪ್ರೀತಿಯಾ ಕರೆ.. ಕೊಳಲಿನಾ ಕರೆ... ಸುಂದರ ಮುಗ್ಧ ಪ್ರಪಂಚವೊಂದು ಕೃಷ್ಣನೊಂದಿಗೆ ತೆರೆದುಕೊಳ್ಳುತ್ತದೆ.


ಪ್ರಶ್ನಿಸು... ಕೇವಲ ಕೃಷ್ಣನಲ್ಲಿ ಪ್ರಶ್ನಿಸು. ಉತ್ತರ ನೀಡುವವನು ಆತ ಮಾತ್ರ. ನಮ್ಮೆಲ್ಲಾ ಸಂದೇಹಗಳ ಉತ್ತರ ಕೃಷ್ಣ ಮಾತ್ರ. 


ಕೃಷ್ಣನಿದ್ದಲ್ಲಿ ರಾಧೆ. ಆತನಿದ್ದಲ್ಲಿ ಪ್ರೀತಿ, ಅಲ್ಲೇ ಕೊಳಲಿನ ಮೃದು ಮಧುರ ಗಾನ. ಅರೇ ಅಲ್ಲೇ ಗೋವಿನ ಅಂಬಾ ನಾದ, ಅದರ ಕೊರಳಿನ ಗೆಜ್ಜೆಯ ಸುಂದರ ನಾದವೂ ಕೇಳುತ್ತದಲ್ಲವೇ..


ಕೃಷ್ಣ ಪ್ರೀತಿಯ ಈ ಬರಹದೊಂದಿಗೆ ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

August 16, 2011

ನಲ್ಲೆಗೆ -

ನನ್ನ ಹೃದಯದಾಳದಲ್ಲಿ
ಅವಿತಿದ್ದೆ ನೀ
ನನ್ನೊಳಗೆ ಪ್ರವಹಿಸುತ್ತಿರುವೆ ಈಗ
ಸಣ್ಣ ನದಿಯಂತೆ
ನನ್ನ ಪ್ರೀತಿಸಬಲ್ಲೆಯಾ
ನನ್ನ ನಲ್ಲೆ ನೀ


ನಿನ್ನ ನಗು ನನಗೆ
ಜೀವಾಮೃತ
ನನ್ನ ಮುದ್ದು ನಿನಗೆ
ಶಕ್ತಿಮದ್ದು
ನಿನ್ನ ಮಾತು ನನಗೆ
ಸಿಹಿ ಜೇನು


ಬೇಡುವೆ ಆ ದೇವನಲಿ ನಾ
ನಿನ್ನ ಕಣ್ಣೀರ ನನಗೆ ನೀಡೆಂದು
ನನ್ನೆಲ್ಲಾ ನಗು
ನಿನ್ನ ನಗುವಿನೊಡನೆ ಸೇರಿ ದ್ವಿಗುಣವಾಗಲೆಂದು
ನಿನ್ನ ಸಂತೊಷ ಚಿರನೂತನವಾಗಿರಲೆಂದು

August 08, 2011

ಗೆಳೆಯನಿಗೆ -ಏಕಾಂಗಿಯಾಗಿ ಕತ್ತಲೆಯೊಳಗಿದ್ದೆ ನಾ
ನೀ ಬಂದೆ ಮಿಂಚಂತೆ
ನಿನ್ನ ಸ್ನೇಹದ ಮಳೆಯಲಿ
ತೋಯಿಸಿದೆ ನನ್ನ

ಸ್ವಾರ್ಥಿ ಗೆಳೆಯರಿಂದ ಮನ
ರೋಸಿತ್ತು ಗೆಳೆಯಾ
ನಿನ್ನ ನಿಷ್ಕಲ್ಮಷ ಪ್ರೀತಿಯಿಂದ
ಮರೆಸಿದೆ ಎಲ್ಲಾ ನೋವ

ನಿನ್ನ ತಾಜಾ ಪ್ರೀತಿ, ಸ್ನೇಹ
ನನ್ನೊಂದಿಗಿರಲಿ ಗೆಳೆಯಾ

ನನಗರಿವಿರದಂತೆ ಇದ್ದೆ ನೀ ಜೊತೆಯಲಿ
ಈಗಿರುವೆ ನನ್ನ ಜೊತೆಯಲಿ
ಮುಂದೆಂದೂ ನನ್ನ ಬಾಳಲಿ ನಿನ್ನ ಸ್ನೇಹವಿರಲಿ
ಜೊತೆಯಿರಲಿ ಗೆಳೆಯಾ...

July 13, 2011

ಸ್ವಗತ - 2

ಹಲವು ವರುಷಗಳ ಬಳಿಕ ಹೇಗೋ ನನ್ನ ಇರುವನ್ನು ಪತ್ತೆ ಹಚ್ಚಿ ನನ್ನ ಬಳಿ ಏಕೆ ಬಂದೆ ಗೆಳತೀ? ನನ್ನನ್ನು ದುರ್ಬಲನನ್ನಾಗಿಸುತ್ತಿರುವೆ.


ಪುರೂ, ಮದುವೆಯಾದ ಮೇಲಾದರೂ ನನಗೆ ನೆಮ್ಮದಿಯ ಬಾಳು ಸಿಗಬಹುದೆಂದು ಬಯಸಿದ್ದೆ. ಆದರೆ ಸದಾ ಸಂಶಯಿತ ಗಂಡ.ಮತ್ತೆ ಕಳೆದು ಹೋಗುತ್ತಿರುವೆ. ಗಂಡ-ಮಗು-ಅತ್ತೆ-ಮಾವ ಹೀಗೆ ಸಂಬಂಧಗಳ ಸುಳಿಯಲ್ಲಿ ಸಿಕ್ಕು ನನ್ನೆಲ್ಲಾ ಹವ್ಯಾಸ, ಆಸಕ್ತಿಗಳನ್ನು ಕಳಕೊಂಡಿದ್ದೇನೆ. ಪ್ರತಿಯೊಂದಕ್ಕೂ ಸಿಟ್ಟು, ಆರೋಗ್ಯವೂ ಕೈ ಕೊಡುತ್ತಿದೆ ಪುರೂ.... ಎಂದು ನೋಡಿದಾಕ್ಷಣ ಹೇಳಿಕೊಂಡಿದ್ದೆ.
ಆಗಲೂ ನನ್ನ ಹೃದಯ ಬಿಚ್ಚಿಡಲು ಮನಸ್ಸಾಗಲಿಲ್ಲ. ಆದರೆ ನಿನ್ನ ಕಂಗಳ ಕಾಂತಿ ಸೊರಗಿರುವುದ ನೋಡಿದೆ.


ಮರುದಿನವೇ ನನ್ನ ’In-Box’ ನಲ್ಲೊಂದು ಸಂದೇಶ - "ಪುರೂ ನಿನ್ನ ನೋಡಿದ ಮೇಲೆ ನನ್ನಲ್ಲೇನೋ ತಲ್ಲಣ. ನಿನ್ನ ಪ್ರಥಮ ಬಾರಿ ನೋಡಿದ್ದಾಗ ಉಂಟಾಗಿದ್ದ ತಲ್ಲಣ. ಈಗಲೂ ನಾನು ಹೇಳದೇ ಹೋದರೆ ಬದುಕು ಪೂರ್ತಿ ಕೊರಗುವೆ."


ಮನೂ, ನಿನ್ನ ತಲ್ಲಣ ನನಗರ್ಥವಾಗಿತ್ತು. ನಿನ್ನ ಬಾಳಲ್ಲಿ ಒಬ್ಬನಿದ್ದಾನೆಂದು ನಾನಂದು ಹೇಳಿರಲಿಲ್ಲ. ನನ್ನ ಗೆಳತಿಯ ಬಗ್ಗೆ ಬಲ್ಲ ನೀನು ನಿನ್ನ ಮನ ಬಿಚ್ಚಿರಲಿಲ್ಲ.


 ಇಂದು ನಮ್ಮಿಬ್ಬರಿಗೂ ಸಂಸಾರವಿದೆ. ಇಬ್ಬರೂ ಹೊರಬಂದು ಹೊಸ ಬಾಳು ಕಟ್ಟುವ ಧೈರ್ಯ ನನ್ನಲ್ಲಿಲ್ಲಿ. ಇನ್ನಿಬ್ಬರ ಬದುಕ ಗೋರಿಯ ಮೇಲೆ ನಾವು ಸಂಸಾರ ಹೂಡಿದರೂ ಅದು ಸುಖಮಯವಾಗಿರದು ಮನೂ...


ಕ್ಷಮಿಸು ಮನೂ...ನಿನ್ನಲ್ಲೊಂದು ಮಾತೂ ಹೇಳಲಾರದವನಾಗಿದ್ದೇನೆ.ನಿನ್ನ ಕರೆಗಳಿಗೆ, ನಿನ್ನ ಸಂದೇಶಗಳಿಗೆ ಕಿವುಡನಾಗಿರುವೆ. ನೀನು ನಿನ್ನ ಸಂಸಾರವನ್ನು ಇಂದಲ್ಲ ನಾಳೆ ಸರಿಪಡಿಸಿಕೊಳ್ಳುತ್ತೀಯ ಎಂಬ ಭರವಸೆ ನನಗಿದೆ ಗೆಳತಿ. ನನ್ನ ಸಂಪರ್ಕಿಸಲು ಪ್ರಯತ್ನಿಸದಿರು..ಒಬ್ಬರನ್ನೊಬ್ಬರು ನೋಡುತ್ತಿದ್ದರೆ ತೀರಾ ದುರ್ಬಲರಾಗುತ್ತೇವೆ.


ನೀನು ನನಗೆ ಕೇವಲ ಗೆಳತಿ ಎಂದರೆ ನನ್ನ ಮನ ಒಪ್ಪದು ಗೆಳತೀ...ಪ್ರೇಯಸಿ ಎಂದರೆ ನಮ್ಮ ಸಂಬಂಧದ ಪವಿತ್ರತೆಗೆ ಅನ್ಯಾಯವೆಸಗಿದಂತೆ..ನೀನು ಸದಾ ನನ್ನ ಆತ್ಮ ಸಂಗಾತಿ. ನಿನ್ನಾತ್ಮದ ಕರೆ ನನಗೆ ತಲುಪಬಲ್ಲದು ಮನೂ... ನನ್ನಾತ್ಮದ ಮಾತು ನಿನ್ನೆದೆಯ ವೀಣೆ ಮೀಟಬಲ್ಲುದು ಗೆಳತಿ...


ಭೂಮಿ ಗುಂಡಗಿದೆ... ನಿನ್ನ ಬಾಳು ನೇರ್ಪಾದ ಮೇಲೆ ಸಾಧ್ಯವಾದರೆ ಭೇಟಿಯಾಗೋಣ.
ಕಥೆ ಬರೆಯುವ ಮೊದಲ ಪ್ರಯತ್ನ. ಹೇಗನ್ನಿಸಿತು ತಿಳಿಸಿ.

July 11, 2011

ಸ್ವಗತ -1

     ಸುಂದರ ಕಣ್ಣುಗಳು ನನ್ನನ್ನು ಸದಾ ಕಾಡುತ್ತವೆ. ಆ ಜೋಡಿ ಕಂಗಳನ್ನು ಜೀವನ ಪೂರ್ತಿ ನೋಡುತ್ತಾ ಇರಬಯಸಿದ್ದೆ. ಇಲ್ಲಿಯವರೆಗೆ ನೋಡಿದ ಯಾವ ಕಣ್ಣುಗಳೂ ನನ್ನನ್ನಿಷ್ಟು ಕಾಡಿರಲಿಲ್ಲ. ನೀನು ನನ್ನನ್ನು ಹಗಲು ರಾತ್ರಿಗಳಲ್ಲಿ ಕಾಡಿದ್ದೆ.


 ನನ್ನ ನಿನ್ನ ಭೇಟಿ ಕೇವಲ ನಾಲ್ಕು ದಿನಗಳದಾಗಿತ್ತು. ಆ ನಾಲ್ಕು ದಿನಗಳಲ್ಲಿ ನಿನ್ನ ಸಮಯವನ್ನು ನನಗಾಗಿ ಮೀಸಲಿಟ್ಟಿದ್ದೆ. ನನ್ನ ಮಾತುಗಳಿಗೆ ನೀನು ಕಿವಿಯಾಗಿದ್ದೆ. ನಿನ್ನನ್ನು ನೋಡುತ್ತಿದ್ದರೆ ಮಾತನಾಡುವ ಸ್ಪೂರ್ತಿ ಉಕ್ಕುತ್ತಿತ್ತು. ತುಂಬಾ ಮುಗ್ಧೆ ನೀನು. ನನ್ನಲ್ಲಿ ತುಂಬು ಗೌರವ ನಿನಗಿತ್ತು. ಆ ಗೌರವವನ್ನು ಉಳಿಸಿಕೊಳ್ಳಲು ನಾನು ಹೆಣಗುತ್ತಿದ್ದದ್ದು ನಿನಗೆ ಗೊತ್ತಾಗಿತ್ತೇ ಮನಸ್ವಿ......


  ನನ್ನ ಬಾಳಲ್ಲೂ ಹಲವು ಗೆಳತಿಯರಿದ್ದರು. ಅಷ್ಟೇಕೆ ನಿನ್ನನ್ನು ಭೇಟಿಯಾದಾಗಲೂ ನನಗೊಬ್ಬ ಗೆಳತಿಯಿದ್ದಳು. ಅದು ನಿನಗೂ ತಿಳಿದಿತ್ತು. ಆದರೆ................ ನಿನ್ನನ್ನು ನೋಡಿದಾಗ ಅದೆಷ್ಟೊ ಜನುಮಗಳಿಂದ ನಿನ್ನ ಕಂಗಳು ನನ್ನೊಂದಿಗಿದ್ದವೆಂಬ ಭಾವ ಸ್ಪುರಿಸಿತ್ತು.


ಅದೊಂದು ದಿನ ನೀನು ಹೇಳಿದ್ದೆ.... "ಪುರೂ ನಾನು ಕಾಣುವಷ್ಟು ಸಂತಸ ನನ್ನ ಬಾಳಲ್ಲಿ ಇಲ್ಲ. ಇಲ್ಲದ ಸಂತೋಷವನ್ನು ನನ್ನ ಮುಖದ ಮೇಲೇರಿಸಿಕೊಂಡು ಬಾಳುತ್ತಿರುವೆ. ಹೆಣ್ಣೆಂದು ಹೀಗಳೆಯುವ ಹೆತ್ತವರು. ಯಾರ ಪ್ರೀತಿಯೂ ಸಿಕ್ಕದ ನತದೃಷ್ಟೆ ನಾನು. ನಿಜವಾದ ಸ್ನೇಹವೂ ನನ್ನಿಂದ ಮೈಲಿ ದೂರ. ಇದರ ಮಧ್ಯೆ ಪ್ರೀತಿಯ ಸುಳಿಯಲ್ಲಿ ಸಿಕ್ಕಿರುವೆ. ಆತನಿಂದ ಹೊರಬರಲಾರದಷ್ಟು ದೂರ ತಲುಪಿರುವೆ. ಮನೆಯಲ್ಲಿ ಒಪ್ಪುವ ಭರವಸೆ ಇಲ್ಲ. ಹೊರಬರುವ ಧೈರ್ಯವಿಲ್ಲ. ತುಂಬಾ ದ್ವಂದ್ವದಲ್ಲಿರುವೆ."
ಅಂದೇ ನಾನು ನಿನ್ನಲ್ಲಿ ಸ್ನೇಹ ಹಸ್ತ ಚಾಚಿದ್ದೆ. ನೀ ನನ್ನ ತೆಕ್ಕೆ ಬಿದ್ದಿದ್ದೆ. ನಿನ್ನೆಲ್ಲಾ ಸಮಸ್ಯೆಗಳಿಗೆ ನಾನು ಉತ್ತರವಾಗಿದ್ದೆ.


ನಿನ್ನ ಬಾಳ ಕಥೆ ಕೇಳಿದ ಮೇಲೆ ನನ್ನ ಪ್ರೀತಿಯ ನಿವೇದಿಸುವ ಧೈರ್ಯ ನನ್ನಲ್ಲಿರಲಿಲ್ಲ ಕಣೇ.... ನಿನ್ನ ಬಾಳನ್ನು ಇನ್ನೂ ಗೋಜಲುಗೊಳಿಸುವ ಮನವಾಗಲಿಲ್ಲ.


ನಾಲ್ಕೇ ನಾಲಕ್ಕು ದಿನಗಳಲ್ಲಿ ನಿನ್ನ ವ್ಯಕ್ತಿತ್ವ ಪರಿಚಯ ನನಗಾಗಿತ್ತು. ನಾನು ಕಲಿತ ಮನಃಶಾಸ್ತ್ರ ನಿನ್ನನ್ನರಿಯಲು ಸಹಕರಿಸಿತ್ತು. ನೀನೊಂದು ತೆರೆದ ಪುಸ್ತಕವಾಗಿದ್ದೆ. ನಿನ್ನೊಡನಾಟದ ಕ್ಷಣಗಳು ನನ್ನ ಬದುಕಿಗೆ ಹೊಸ ಹುರುಪನ್ನು ಕೊಟ್ಟಿತ್ತು.
will be continued in next post...

May 16, 2011

ಮಲೆಂಗಲ್ಲು!!!


ಎತ್ತರವಾದ ಕಲ್ಲು ಹಾಸಿನ ಬೆಟ್ಟ... ಮೇಲೊಂದು ಚಿಕ್ಕ ಚೊಕ್ಕ ಉಮಾಮಹೇಶ್ವರ ದೇವರ ಸ್ಥಾನ... ಸುತ್ತೆಲ್ಲಾ ಹಸಿರ ಸಿರಿ... ಕಣ್ಣು ಹಾಯಿಸಿದಲ್ಲೆಲ್ಲಾ ದೂರದ ಬೆಟ್ಟಗುಡ್ಡಗಳು  - ಅವನ್ನು ಚುಂಬಿಸಬಯಸುವ ನೀಲಾಕಾಶ....
ವಾವ್... ಅಲ್ಲವೇ??? ಯಾವುದೋ ಪ್ರಸಿದ್ದ ಪ್ರವಾಸೀ ಸ್ಥಳದ ಬಗ್ಗೆ ಹೇಳುತ್ತಿದ್ದೇನೆ ಅಂದುಕೊಂಡಿರಾ??? ಖಂಡಿತಾ ಇಲ್ಲ... ಪ್ರಪಂಚಕ್ಕೆ ತಿಳಿಯದಿರುವ, ಕೇವಲ ಸುತ್ತಮುತ್ತಲಿನ ಜನ ತಿಳಿದಿರುವ ಮಲೆಂಗಲ್ಲು ಎಂಬೋ ಜಾಗದ ಬಗ್ಗೆ ನಾನೀಗ ಹೇಳ ಹೊರಟಿರುವೆ... 
ಧರ್ಮಸ್ಥಳದಿಂದ ಉಪ್ಪಿನಂಗಡಿಗೆ ಹೋಗುವ ಮಾರ್ಗದಲ್ಲಿ ಕುಪ್ಪೆಟ್ಟಿ ಇದೆ. ಇಲ್ಲಿಂದ ಎಡಕ್ಕೆ ಸುಮಾರು ೭ ಕಿ.ಮೀ. ಗಳ ದೂರದಲ್ಲಿರುವುದು ಪದ್ಮುಂಜ ಅಲ್ಲಿಗೆ ಹೋಗುವ ರಸ್ತೆಯಲ್ಲಿ ಬಲಕ್ಕೆ ಉಮಾಮಹೇಶ್ವರ ದೇವಸ್ಥಾನ ಎಂದು ಬರೆದಿರುವ ಸಣ್ಣ ಮಾರ್ಗ ಸೂಚಿ ಇದೆ. ಅಲ್ಲಿ ಮೇಲೆ ಹತ್ತಿಕೊಂಡು ಹೋದರೆ ಕಾಣುವ ದೃಶ್ಯ ನಯನ ಮನೋಹರ.
ಸಂಜೆಯ ಸಮಯದಲ್ಲಿ ಅಲ್ಲಿ ಮನುಷ್ಯ ಸಂಚಾರವಿಲ್ಲ. ಪ್ರಕೃತಿಯೊಂದಿಗೆ ತಾದಾತ್ಮ್ಯ ಸಾಧ್ಯವಾಗುವ ಜಾಗ.
ಬೆಟ್ಟದ ಮೇಲಿನ ಸೂರ್ಯಾಸ್ತವನ್ನು ಯಾವುದೇ ಗಲಾಟೆ ಗದ್ದಲಗಳಿಲ್ಲದೆ ನೋಡಬಹುದು.
ಎಲ್ಲಕ್ಕಿಂತ ಮುಖ್ಯವಾಗಿ ಇದು ಮನುಷ್ಯನ ಕ್ರೂರ ದೃಷ್ಟಿ ಬೀಳದಿರುವ ಸ್ಥಳ. 

ಹೊರಸುತ್ತಿನ ಪೌಳಿಯಿಂದ ನೋಡಿದ ಸೂರ್ಯಾಸ್ತ ಮರೆಯಲಸಾಧ್ಯ.

ಈಲ್ಲಿನ ಸ್ಥಳ ಪುರಾಣದ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ಗರ್ಭಗುಡಿಯ ಹೊರಭಾಗದಲ್ಲಿ ಹಾಕಿದ ಫಲಕ ಹೇಳುತ್ತದೆ:

ಬೆಳಗಿನ ಹೊತ್ತು ದೇವರಿಗೆ ಪೂಜೆ ನಡೆಯುತ್ತದೆ. ಉಮಾಮಹೇಶ್ವರ ವಿಗ್ರಹವಿರುವ ಅಪರೂಪದ ದೇವಸ್ಥಾನ.


ವರುಷಕ್ಕಾಗುವಷ್ಟು ಹಸಿರನ್ನು ಕಣ್ಣ ತುಂಬಿಸಿ ಹೊರಡಲು ಮುಷ್ಕರ ಹೂಡುತ್ತಿದ್ದ ಮನಸ್ಸಿನೊಂದಿಗೆ ಹೊರಟೆ.

ಕುಪ್ಪಳಿ

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ....

ಕುವೆಂಪು ರವರೇ ನಿಂತು ಸ್ವಾಗತಿಸುತ್ತಿದ್ದರೇನೋ ಎಂದೊಮ್ಮೆ ಅನಿಸಿದ್ದು ಸುಳ್ಳಲ್ಲ..

ಶಿವಮೊಗ್ಗೆಯಿಂದ ೮೦ ಕಿ.ಮೀ ದೂರದಲ್ಲಿರುವ ಕವಿ ಮನೆ ಕುಪ್ಪಳಿಗೆ ಭೇಟಿ ನೀಡುವ ಆಸೆ ಎಂದೋ ಇತ್ತು. ಅದು ವಿಶ್ವ ಅಮ್ಮಂದಿರ ದಿನದಂದು ಪೂರೈಸಿತು.

ಕುವೆಂಪು ಬೆಳೆದ ಕುಪ್ಪಳಿ, ಅವರ ಕಾದಂಬರಿಯಲ್ಲಿ ಚಿತ್ರಿತವಾದ ಮಲೆನಾಡು ನೋಡಿ ಸಂತಸವಾಯ್ತು.
ಕುವೆಂಪುರವರ ಊರಿನ ಚಿತ್ರಣವನ್ನು ಅವರ ಕವನದಲ್ಲಿ ಓದುವುದೇ ಸರಿ -
"ತೀರ್ಥಹಳ್ಳಿ ಯ ಕಳೆದು ತಾಯಿ ತುಂಗೆಯದಾಟಿ
ಒಂಬತ್ತು ಮೈಲಿಗಳ ದೂರದಲಿ ನಮ್ಮೂರು
ಊರೆಂದರೊಂದೆ ಮನೆ. ಪಡುವೆಟ್ಟುಗಳ ನಾಡು
ದಟ್ಟವಾದಡವಿಗಳು ಕಿಕ್ಕಿರಿದ ಮಲೆನಾಡು
ಸುತ್ತಲೂ ಎತ್ತರವಾದ ಬೆತ್ತಗಳು, ಕಾಡುಗಳು
ಎತ್ತ ನೋಡಿದರತ್ತ ಸಿರಿಹಸಿರು....."


ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನದವರು ನವೀಕರಿಸಿದ ಕುವೆಂಪು ಪೂರ್ವಜರ ಚೆಂದದ ತೊಟ್ಟಿಮನೆ. ಅವರ ಕಾಲದಲ್ಲಿ ಬಳಕೆಯಾದ ವಸ್ತುಗಳ ಸಂಗ್ರಹಾಲಯ ಕುಪ್ಪಳಿಯಲ್ಲಿ ಇದೆ.

ಮನೇ ಮನೇ ಮುದ್ದು ಮನೆ

ಮನೇ ಮನೇ ನನ್ನ ಮನೆ

ಎಂದು ಕುವೆಂಪುರವರಿಗೆ ಹಲವು ಕವನಗಳಿಗೆ, ಮಲೆಗಳಲ್ಲಿ ಮದುಮಗಳು ಹಾಗೂ ಕಾನೂರ ಹೆಗ್ಗಡತಿಯಂತಹ ಮಹಾ ಕಾದಂಬರಿಗಳಿಗೆ ಸ್ಪೂರ್ತಿಯ ಸೆಲೆಯನಿತ್ತ ಮನೆಯ ಭೇಟಿ ಮೈ ರೋಮಾಂಚನಗೊಳಿಸಿತು.

ಹಳೆಯ ವಸ್ತುಗಳು,ಕುವೆಂಪುರವರಿಗೆ ಬಂದ ಪ್ರಶಸ್ತಿಗಳು, ಅವರ ಪುಸ್ತಕಗಳು, ಕುವೆಂಪುರವರು ಬಳಸುತ್ತಿದ್ದ ಕೆಲವು ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ.ಕುವೆಂಪುರವರ ಗುಂಗುರು ಕೂದಲನ್ನೂ ಜೋಪಾನ ಮಾಡಿದ್ದರೆ. ಅದನ್ನು ನೋಡುವಾಗ ಭಾವಪರವಶಳಾಗಿದ್ದು ಸುಳ್ಳಲ್ಲ.

ಕವಿ ಮನೆಯಲ್ಲಿ ಉದಯರವಿ ಪ್ರಕಾಶನದ ಪುಸ್ತಕಗಳನ್ನು ಶೇಕಡಾ ೧೦ ರ ರಿಯಾಯತಿ ದರದಲ್ಲಿ ಮಾರಾಟಕ್ಕೆ ಇಡಲಾಗಿದೆ. ಅಲ್ಲಿ ತಾರಿಣಿ ಚಿದಾನಂದ ಬರೆದ 'ಮಗಳು ಕಂಡ ಕುವೆಂಪು' ಪುಸ್ತಕವನ್ನು ಖರೀದಿಸಿದೆ - ಇದರ ಬಗ್ಗೆ ಇನ್ನೊಮ್ಮೆ ಬರೆಯುವೆ.

ಕವಿ ಮನೆಗೆ ಸಮೀಪದಲ್ಲಿ ಕವಿಶೈಲವಿದೆ. ಎಂತಹ ಕಲ್ಲು ಹೃದಯಿಗೂ ಭಾವ ಒಸರುವ ರಮ್ಯ ತಾಣ. ಶಬ್ದಗಳಲ್ಲಿ ವಿವರಿಸಲು ಅಸಾಧ್ಯ. 


ಕವಿ ಹೇಳುತ್ತಾರೆ: "ಪ್ರಕೃತಿ ದೇವಿಯ ಸೊಬಗು ದೇಗುಲದಿ ಆನಂದವೇ ಪೂಜೆ ; ಮೌನವೇ ಮಹಾ ಸ್ತೋತ್ರ!"
ಖಂಡಿತಾ... ಮಾತಿಗಲ್ಲಿ ಅವಕಾಶವೇ ಇಲ್ಲ....


ಕುವೆಂಪುರವರ ಕಾಲಾನಂತರದಲ್ಲಿ ನಿಲ್ಲಿಸಲಾದ ಬ್ರಹತ್ ಕಲ್ಲುಗಳು:
ಹಲವುಸಲ ಕಣ್ಣಾರೆ ನೋಡಬೇಕೆಂದಿದ್ದ, ಕುವೆಂಪು ಹಾಗೂ ಅವರ ಸ್ನೇಹಿತರು ಕಲ್ಲಿನಲ್ಲಿ ಬರೆದಿರುವುದು:


೯೦ ವರ್ಷಗಳ ತುಂಬು ಬಾಳನ್ನು ಬಾಳಿದ, ವಿಶ್ವ ಮಾನವ ಸಂದೇಶವನ್ನಿತ್ತ ಕನ್ನಡಿಗರ ಹೆಮ್ಮೆಯ ಅನಿಕೇತನ ಕವಿ ಕುವೆಂಪುವಿಗಿದೋ ನಮನ.

April 13, 2011

ವಿಷುವಿನ ಶುಭಾಶಯಗಳು.


ವಿಷುವಿನ ಶುಭಾಶಯಗಳು.

ಇಂದು ವಿಷು. ಕೇರಳ ಹಾಗೂ ಅವಿಭಜಿತ ದಕ್ಷಿಣ ಕನ್ನಡದ ಹಲವರಿಗೆ ಇದು ದೊಡ್ಡ ಹಬ್ಬ. ಹೊಸ ವರುಷದ ಆರಂಭ.

ಮನೆಯ ಯಜಮಾನ ದೇವರ ಮುಂದೆ ನೂತನ ಫಲ ವಸ್ತು, ಬೆಳ್ಳಿ, ಬಂಗಾರ, ಹಣ ಎಲ್ಲವನ್ನೂ ಇಡುತ್ತಾನೆ. ಇದಕ್ಕೆ ’ವಿಷು ಕಣಿ’ ಎಂದು ಹೇಳುತ್ತಾರೆ.

ಮನೆಯ ಸದಸ್ಯರೆಲ್ಲರೂ ಬೆಳಿಗ್ಗೆ ಎದ್ದು ಮೊದಲು ’ಕಣಿ’ ನೋಡಿಯೇ ಮುಂದಿನ ಕೆಲಸಗಳತ್ತ ಸಾಗುತ್ತಾರೆ. ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಲಾಗುತ್ತದೆ. ಹೊಸ ಬಟ್ಟೆ ತೊಡುವುದೇ ಸಂಭ್ರಮ. ಯಾವ ಹಬ್ಬಕ್ಕೂ ಹೊಸ ಬಟ್ಟೆ ಖರೀದಿಸದಿದ್ದರೂ ವಿಷುವಿಗೆ ಹೊಸ ಬಟ್ಟೆ ಖಂಡಿತಾ.
ಅಂದೇ ಮನೆಯ ಕೆಲಸಗಾರರಿಗೂ ಕರೆದು ಹೊಸ ಬಟ್ಟೆ ಇತ್ತು ಪಾಯಸದ ಔತಣ ಬಡಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಗೇಣಿ ಅಥವಾ ಒಕ್ಕಲು ಮಕ್ಕಳು ಒಡೆಯನ ಮನೆಗೆ ಹಣ್ಣು, ಹೊಸ ಫಲಗಳನ್ನು ನೀಡುವ ವಾಡಿಕೆಯೂ ಇತ್ತಂತೆ.
ಗೇರು ಬೀಜ ಬಿಡುವ ಕಾಲ ಇದಾದ್ದರಿಂದ ಎಳೇ ಗೇರುಬೀಜ (ಚೋರೆ)ದ ಪಾಯಸ, ವಡೆ ಇತ್ಯಾದಿಗಳ ಭರ್ಜರಿ ಊಟ ಅಂದು ನಡೆಯುತ್ತದೆ.

ಮಕ್ಕಳಿಗೆ ಹೊಸ ಬಟ್ಟೆ, ಹಿರಿಯರಿಂದ ಪಾವತಿಯಾದ ಹಣದ ಮೊತ್ತ ಇವುಗಳ ಕಡೆಯೇ ಗಮನ.
ಹರೆಯದ ಹುಡುಗರಿಗೆ ಹಿರಿಯರಿಂದ ಧಮಕಿ - ಕಾಲಿಗೆ ನಮಸ್ಕರಿಸಿದರೆ ಮಾತ್ರ ದುಡ್ಡು ಕೊಡುವೆ, ಇಲ್ಲವಾದಲ್ಲಿ ಇಲ್ಲ !!!!

ಸುಂದರ ನೆನಪುಗಳು. ಪ್ರತೀ ವಿಷುವಿಗೂ ಒಂದೊಂದು ನೆನಪುಗಳು. ಸೌರ ಯುಗಾದಿ - ವಿಷುವಿನ ಶುಭಾಷಯಗಳು. ಹೊಸ ವರುಷ ಹರುಷ ತರಲಿ.

April 10, 2011

ಮಾನವಾ ನೀನ್ಯಾಕೆ ಹೀಗೆ

"ಇದೇನಾ ಸಂಸ್ಕೃತಿ.... ಇದೇನಾ ಸಭ್ಯತೆ" ಎಂದು ಮನಸ್ಸು ಕೇಳುತ್ತಿತ್ತು.ಮನುಷ್ಯ ಯಾಕಿಷ್ಟು ಕ್ರೂರಿ. ಪ್ರಕೃತಿಯ ಮೇಲೆ ಸದಾ ಆತನ ದೌರ್ಜನ್ಯ ಸಾಗುತ್ತಲೇ ಬಂದಿದೆ. ಯಾಕಾಗಿ? ಆಕೆ ಕ್ಷಮಯಾ ಧರಿತ್ರಿ ಎಂದೆ? 

ಇದು ಸುಂದರವಾದ ಕಣ್ವ ಜಲಾಶಯದ ತೀರ. ಆದರೆ ಸುಂದರ ಜಲಾಶಯದ ಸುತ್ತ 'ಪ್ರಕೃತಿ ಪ್ರಿಯ'ರು ಎಸೆದ ಪ್ಲಾಸ್ಟಿಕ್, ಗಾಜುಗಳು. ಬೆಂಗಳೂರಿನಿಂದ ೬೯ ಕಿ.ಮೀ. ದೂರದಲ್ಲಿರುವ ಕಣ್ವ ಜಲಾಶಯ ಭೇಟಿಯೋಗ್ಯ ಸ್ಥಳ. ನಗರದ ಜಂಜಡಗಳಿಂದ ಕೆಲವು ಘಂಟೆಗಳ ಮುಕ್ತಿ, ನೀರಿನ ಸಮೀಪ ಸಮಯ ಕಳೆಯುವ ತಾಣ ಈ ಕಣ್ವ ಜಲಾಶಯ. ಕಣ್ವ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟಿನಿಂದಾಗಿ ಆಗಿರುವ ಕೃತಕ ಸರೋವರ. ಕೆಲವು ಹಕ್ಕಿಗಳ ನೆಚ್ಚಿನ ತಾಣ. ಹಾಗೆಯೇ ಪರಿಸರದ ಬಗ್ಗೆ ನಿಷ್ಕಾಳಜಿ ವಹಿಸುವವರೂ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಆಕ್ಷೇಪಿಸಲು ಅಲ್ಲಿ ಯಾರೂ ಇಲ್ಲ. 
ಇತ್ತೀಚಿಗೆ ಅಲ್ಲಿಗೆ ಹೋಗಿದ್ದೆ ಆದರೆ ಕಸದ ರಾಶಿಯನ್ನು ನೋಡಿ ಅಲ್ಲಿನ ಸೌಂದರ್ಯವನ್ನು ಸವಿಯಲು ಮನಸ್ಸು ಮುರಿದು ಹೋಯ್ತು.

ಹೇಳಿ ಓದುಗರೇ ಇದಕ್ಕೇನು ಮಾಡಬಹುದು????

March 15, 2011

ರಾಧಾ- ಕೃಷ್ಣ

ರಾಧಾ- ಕೃಷ್ಣ 
ಕೃಷ್ಣ -ರಾಧೆ
ಪ್ರೀತಿಯ ಧಾರೆ
ಸುಂದರ ಪ್ರಪಂಚ ಅವರದು
ಅಲ್ಲೊಂದು ಪ್ರೀತಿಯ ಸ್ವರ - 
- ನುಡಿಸಲೊಂದು ಕೊಳಲು 
ಕೊಳಲ ಕೊರಳಾಗುವ ಕೃಷ್ಣ 
ಆ ನಾದಕ್ಕೆ ಕಿವಿಯಾಗುವಳು ರಾಧೆ 

January 28, 2011

ಬೇಡದ ಕನಸುಗಳು!!!??


ತಲೆ ಬಾಲಗಳಿರದ ಕನಸುಗಳೇ
ಸುಳಿಯದಿರಿ ನನ್ನ ಬಳಿ
ಸುಳಿದು ನನ್ನ ನಾಳೆಗಳ
ಹಾಳುಗೆಡವದಿರಿ

ನಿದ್ದೆಯನು ಅಲಭ್ಯವಾಗಿಸಿದ
ಕನಸುಗಳೇ ಹೋಗಿರಿ ದೂರ
ಕನಸುಗಳು ಸುಂದರವೆನುವರು
ನನ್ನ ಕನಸುಗಳೇಕೆ ಭೀಕರ

ಇತ್ತೊಂದು ಕಾಲ, ಹಗಲ್ಕನಸ ಕಾಣುತ್ತಾ
ಆಲಂಗಿಸುತ್ತಿದ್ದೆ ನಿದ್ರಾದೇವಿಯ
ಕನಸುಗಳಿರದ ಮೈಹಗುರಾಗುವ ನಿದ್ದೆ
ಇರುಳಿಡೀ ಸುಖ ನಿದ್ದೆ

ಇಂದು ಬಂದಿದೆ ಕಾಲ, ಚಿಂತೆಗಳೇ ಮನದ ತುಂಬಾ
ಮೈ ಹಾಸಿಗೆಗಿಟ್ಟೊಡನೆ ಆವರಿಸುವುದು ನಿದ್ದೆ
ಅದಕೋ ಏನೋ ನಿದ್ದೆಯಲ್ಲೂ ಸುಖವಿಲ್ಲ
ಸಪ್ನಾದೇವಿ ಕಾಡುವಳು ರಾತ್ರಿಯೆಲ್ಲಾ

January 17, 2011

ಗೆಳೆತನ - ನೋವು ???

ಇದ್ದೆನು ನಾ ನನ್ನಷ್ಟಕ್ಕೆ ನನ್ನ ಗೂಡಲ್ಲಿ
ಏಕೆ ಬಂದೆ ನೀ ನನ್ನ ಬಾಳಲ್ಲಿ
ಗೆಳೆತನದಲ್ಲಿ ವಿಶ್ವಾಸ ಕಳಕೊಂಡಿದ್ದ ಕ್ಷಣದಲ್ಲಿ
ಬಂದೆ ನೀ ಗೆಳೆಯನಾಗಿ ನನ್ನ ಜೀವನದಲ್ಲಿ

 ಹೃದಯದಲ್ಲಿಲ್ಲದ ಆತ್ಮವಿಶ್ವಾಸವ ವೃದ್ದಿಸಿದೆ
ಜೀವನದಲ್ಲಿಲ್ಲದ ಆಕಾಂಕ್ಷೆಯ ಹೆಚ್ಚಿಸಿದೆ
ನಿನ್ನನ್ನು ನನ್ನ ಗೆಳೆಯನಾಗಿ ಪ್ರೀತಿಸಿದೆ
ನನ್ನೆಲ್ಲಾ ವಿಚಾರಧಾರೆಗಳ ನಿನ್ನೊಂದಿಗೆ ಹೇಳಿದೆ

ಈಗ ಏಕೀ ಮೌನ ಗೆಳೆಯಾ
ನಾ ಸಹಿಸಲಾರೆ ನೀ ನೋವಾ
ನಿನ್ನನೊಮ್ಮೆ ನೋಡುವಾಸೆ ಗೆಳೆಯಾ
ಆದರೆ ನನ್ನ ನಾ ಬಂಧಿಸಿರುವೆನಲ್ಲಾ......