December 07, 2010

ಶಕುನ

"ಸೆಲ್ಯೂಟ್ ಕುಪ್ಪುಳು" ಇದು ಎಲ್ಲಿಯೇ ಯಾವುದೇ ಕುಪ್ಪುಳು ಅಂದರೆ ಕೆಂಭೂತ ಕಂಡಾಗ ನನ್ನ ಮನದಲ್ಲಿ ನೆನಪಾಗುವ ಶಬ್ಧಗಳು. ಸಣ್ಣವಳಿದ್ದಾಗ ಗೆಳತಿಯೊಬ್ಬಳು ಹೇಳಿದ ನೆನಪು... ಕೆಂಭೂತ ಕಂಡಾಗ ಹೇಳಿದರೆ ಆ ದಿನ ಶುಭದಿನ, ಲಾಭದ ದಿನ ಎಂದು.
        ಇದೇ ರೀತಿ ದಿನದಲ್ಲಿ ಹಲವು ಶಕುನಗಳನ್ನು ನಂಬುತ್ತಲೇ ಇರುತ್ತೇವೆ. ಬಲದ ಕಣ್ಣು ಅದುರಿದರೆ  ಆ ದಿನ ಗಂಡು ಮಕ್ಕಳಿಗೆ ಶುಭ, ಹೆಣ್ಣು ಮಕ್ಕಳಿಗೆ ಅಶುಭ. ಹಾಗೆಯೇ ಎಡದ ಕಣ್ಣು ಹೆಣ್ಣು ಮಕ್ಕಳಿಗೆ ಶುಭ, ಗಂಡು ಮಕ್ಕಳಿಗೆ ಅಶುಭ. ಅಂಗೈ ತುರಿಸಿದರೆ ಯಾವುದೋ ಲಾಭದ ಮುನ್ಸೂಚನೆ.ಬೆಕ್ಕು ಅಡ್ದ ಬಂದರೆ ಅಶುಭ. ೧೩ ಸಂಖ್ಯೆ ಅಶುಭ. ತುಂಬಾ ನಕ್ಕ ದಿನ ಅಳು ನಿಶ್ಚಿತ (ತೀರಾ ಇತ್ತೀಚಿನವರೆಗೂ ಇದನ್ನು ನಂಬುತ್ತಿದ್ದೆ !!!). ಕಾಗೆ ಬೆಳಗಿನ ಹೊತ್ತು ಮನೆ ಎದುರಿನ ಮರದಲ್ಲಿ ಕುಳಿತು ಕೂಗಿದರೆ ಆ ದಿನ ನೆಂಟರ ಆಗಮನ. (ಕಾಂಕ್ರೀಟು ಕಾಡಿನಲ್ಲಿ ಮನೆ ಎದುರಿನ ಮರ ದುರ್ಲಭ :-) ).

             ಆದರೆ, ಈ ಶಕುನಗಳೆಂಬುದು ನಿಜವಾಗಿಯೂ ಸತ್ಯವೇ? ಇಲ್ಲಾ ಮನುಷ್ಯನ ಮನಸ್ಸಿನ ದೌರ್ಬಲ್ಯವೇ???
ನನ್ನ ಪ್ರಕಾರ ಇದು ದುರ್ಬಲ ಮನಸ್ಸಿನ ಹೊಂದಾಣಿಕೆಗಳು. " ಕಾಗೆ ಕೂರುವುದಕ್ಕೂ ರೆಂಬೆ ಮುರಿಯುವುದಕ್ಕೂ ಸರಿಯಾಯ್ತು" ಎಂಬಂತೆ ಮನುಷ್ಯ ಯಾವುದನ್ನೋ ಸಾಧಿಸಲೇ ಬೇಕೆಂದು ಹೋಗಿ ಸಾಧ್ಯವಾಗದಾಗ ಅದನ್ನು ಶಕುನಗಳಿಗೆ ಬಿಡುತ್ತಾನೆ. ಇನ್ನು ಕೆಲವೊಂದು ಬಾರಿ ತಪ್ಪೊಪ್ಪಿಕೊಳ್ಳಲು ಸಾಧ್ಯವಾಗದಾಗ ಶಕುನಗಳಿಗೆ ಬಿಡುವುದೂ ಹೌದು. ಒಂದು ಸಲ ಒಳ್ಳೆಯದಾದಾಗ ಆ ಸಮಯದ ಕೆಲವು ಘಟನೆಗಳು ಪುನರಾವರ್ತನೆ ಆಗುವುದರಿಂದ ಒಳ್ಳೆಯದಾಗುತ್ತದೆ ಎಂಬ ಮೂಢ ನಂಬಿಕೆಯೂ ಶಕುನಗಳಾಗಿ ಬದಲಾಗುತ್ತವೆ. 
ಇವಲ್ಲದೆ ಪ್ರಕೃತಿ ಮಾನವನಿಗಿಂತ ಶ್ರೇಷ್ಟ, ಪ್ರಾಣಿಗಳಿಗೆ ಮಾನವನಿಗಿಂತ ಜಾಸ್ತಿ ವಿವೇಕ ಇದೆ, ಅವುಗಳನ್ನು ಗೌರವಿಸಬೇಕೆಂಬ ದೃಷ್ಟಿಯಿಂದ ಪೂರ್ವಜರು ಕೆಲವನ್ನು ಹೇಳಿದ್ದಾರೆ. ಇಲ್ಲಿ ಹಿಂದೆ ಪ್ರಾಣಿಗಳಿಗೂ ಮಾತು ಬರುತ್ತಿತ್ತು ಎಂಬ ಅಜ್ಜಿ ಕಥೆ ನೆನಪಾಗುತ್ತದೆ.
ನೀವೂ ಹೇಳಿ ಶಕುನಗಳು  ನಿಮ್ಮ ಜೀವನದಲ್ಲಿ ಎಷ್ಟು ಮುಖ್ಯವಾಗಿವೆ ???

2 comments:

  1. ಆತ್ಮವಿಶ್ವಾಸದ ಕೊರತೆ, ಅಸಹಾಯಕತೆ ಮತ್ತು ಹತಾಶ ಮನಸು ಶಕುನಗಳನ್ನು ಹೆಚ್ಚು ನಂಬುವಂತೆ ಮಾಡುತ್ತದೆ ಎಂದು ನನ್ನ ಅಭಿಪ್ರಾಯ. ನೀವೆಂದಂತೆ ಪ್ರಾಣಿಗಳಲ್ಲಿ ಗೌರವಭಾವ ಉಳಿಸಿಕೊಳ್ಳಲೋ ಅಥವ ಮುನ್ನಚ್ಚೆರಿಕೆಗಾಗಿಯೋ ಕೆಲವೊಂದು ಸಂಕೇತಗಳನ್ನು ಹಿರಿಯರು ಮಾಡಿದ್ದರೆನ್ನಬಹುದು. ಉದಾ: ಬೆಕ್ಕು ಅಡ್ಡಬರುವುದು. ಹಿಂದೆಲ್ಲಾ ಕಾಡುಗಳಿದ್ದ ಸಂದರ್ಭದಲ್ಲಿ ಬೆಕ್ಕುಗಳನ್ನು ತಿನ್ನಲು ತೋಳಗಳೋ ಅಥವ ಇತರೆ ಪ್ರಾಣಿಗಳು ಬರುತ್ತಿದ್ದವಂತೆ, ಅಂತಹ ಸಂದರ್ಭದಲ್ಲಿ ಬೆಕ್ಕು ಬೆದರಿ ಓಡಿತು ಎಂದರೆ, ಮಾನವರಿಗೆ ಅದು ಅಪಾಯದ ಸೂಚನೆಯಾಗುತ್ತಿತ್ತು. ಹೇಳಿ-ಕೇಳಿ ಬೆಕ್ಕು ಸೋಮಾರಿ ಪ್ರಾಣಿ. ದಿನದ ೧೬ ಗಂಟೆಗಳನ್ನು ನಿದ್ರೆಯಲ್ಲೇ ಕಳೆಯುತ್ತದೆ. ಅದು ಓಡುತ್ತದೆ ಎಂದರೆ ಒಂದೋ ಹೆದರಿ ಅಥವ ಬೇಟೆಗಾಗಿ ...ಹೀಗಿರಬಹುದು ಅಲ್ಲವೆ ? ನೀವು ’ಸುಧಾ’ ಓದುಗರಾಗಿದ್ದರೆ , ಈ ವಾರದ ಸುಧಾದಲ್ಲಿ ಇದರ ಬಗ್ಗೆ ಒಳ್ಳೆಯ ಲೇಖನ ಬಂದಿದೆ, ನೋಡಿ. ಧನ್ಯವಾದ

    ReplyDelete
  2. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
    ನಾನು ಸುಧಾ ಓದುಗಳಲ್ಲ... ಈ ವಾರ ಓದುತ್ತೇನೆ... ಧನ್ಯವಾದಗಳು...

    ReplyDelete