December 30, 2010

ಜಾಗೋ ಗ್ರಾಹಕ್ ಜಾಗೋ

ಹೇಳಿರುವ ಬೆಲೆ ೧೭, ಆದರೆ ನಾವು ಕೊಡುವ ಬೆಲೆ ೩೫ !!!!
ಆಶ್ಚರ್ಯ ಆಗುತ್ತಿದೆ ಅಲ್ಲವೇ.. ಹೌದು ಇದೇ ನಡೆಯುತ್ತಿದೆ ಇಂದಿನ ಕೆಲವು 'ಮಾಲ್'ಗಳಲ್ಲಿ.
ನಿನ್ನೆ ಬೆಂಗಳೂರಿನ ಬಡಾವಣೆಯಲ್ಲಿನ ಆಹಾರ ಮಳಿಗೆಯೊಂದಕ್ಕೆ ಭೇಟಿ ನೀಡಿದ್ದೆ. ಹಣ್ಣು ತರಕಾರಿಗಳ ಬೆಲೆ ಹೆಚ್ಚಾದ ನಿಟ್ಟಿನಲ್ಲಿ ಬೆಲೆ ಕಡಿಮೆ,  ಒಳ್ಳೆಯ ಮಾಲು ಇರುವಲ್ಲಿಗೆ ನಾವು ಹೋಗುವುದು ಸಹಜ. ಹಾಗೇ ಅಲ್ಲಿ ಗ್ರಾಹಕರಿಗೆ ಬೆಲೆಪಟ್ಟಿಯಲ್ಲಿ ನಮೂದಾಗಿದ್ದ ಬೆಲೆಯ ಆಧಾರದಲ್ಲಿ ಒಂದಷ್ಟು ಕೊಂಡಿದ್ದೆ. ಮಾರಾಟಗಾರ್ತಿ ’ಬಿಲ್’ ಮಾಡಿ ಕೈಗಿತ್ತಾಗ ಒಂದಕ್ಕೆರಡು ಬೆಲೆಗಳನ್ನು ಹಾಕಲಾಗಿತ್ತು. ಕೊನೆಗೂ ನಮೂದಾಗಿದ್ದ ಬೆಲೆಗೆ ಪಡೆದುಕೊಳ್ಳುವಲ್ಲಿ ಸಫಲಳಾಗಿದ್ದೆ.

ಆದರೆ, ನಿನ್ನೆ ಇದ್ದಿದ್ದು ಕೆಲವೇ ವಿಧಗಳು, ಹೆಚ್ಚು ಗ್ರಾಹಕರಿರಲ್ಲಿಲ್ಲವಾಗಿ ತಾಳೆ ನೋಡಲು ಸಾಧ್ಯವಾಯಿತು. ತಿಂಗಳ ಸಾಮಾಗ್ರಿಗಳನ್ನು ತರುವಾಗ ಪ್ರತಿಯೊಂದನ್ನೂ ನಮೂದಾದ ಬೆಲೆಯನ್ನು ನೆನಪಿರಿಸಿಕೊಳ್ಳುವುದು ಸಾಧ್ಯವಿಲ್ಲ. ನಾವು ಎಚ್ಚೆತ್ತು ಕೊಳ್ಳಲೇ ಬೇಕು. ದರಗಳಂತೂ ದಿನ ದಿನವೂ ಹೆಚ್ಚುತ್ತಲೇ ಇದೆ. ಅದರೊಂದಿಗೆ ಈ ರೀತಿ ಮೋಸ ಹೋಗುತ್ತಿರುತ್ತೇವೆ.

ಇದೇ ಸಂಧರ್ಭದಲ್ಲಿ ಆಟೋ ಚಾಲಕರ ಆಟಾಟೋಪಗಳನ್ನೂ ಹೇಳಬೇಕೆನ್ನಿಸುತ್ತದೆ. ಇದು ಎಲ್ಲಾ ಅಟೋ ಚಾಲಕರಿಗೆ ಸಂಭಂದಿಸಿದ್ದಲ್ಲ, ಅದರೂ ನನಗೆ ೮೫% ಸಲ ಆದ ಅನುಭವ: ೧೭ರೂ. ಆದರೆ, ಚಿಲ್ಲರೆ ಇದ್ದರೂ ಇಲ್ಲ ಎಂಬ ಸಬೂಬು, ೨೦ ರೂ. ಗುಳುಂ !!! ಯಾವುದೇ ಅಂಗಡಿಗಳಿಗೆ ಹೋದಾಗ ಚಿಲ್ಲರೆ ಇಲ್ಲದೇ ನಾವು ಅಂಗಡಿಯಾತನಿಗೆ ಚಿಲ್ಲರೆ ಬಿಟ್ಟು ಬಂದಿಲ್ಲ.
ಟಿ.ವಿ ಯಲ್ಲಿ ಒಂದು ದಿನ ಒಬ್ಬ ಆಟೋ ಚಾಲಕ ಹೇಳುತ್ತಿದ್ದ, "ಆಟೋದಲ್ಲಿ ಬರುವ ಕೆಲವರು ೧೭ರೂ ಆದಾಗ ೨೦ ರೂ ಕೊಡುತ್ತಾರೆ (ಇಲ್ಲ ತೆಗೆದುಕೊಳ್ಳುತ್ತಾರೆ) ಅದರಲ್ಲಿ ೧ ರೂ ಬಡವನಿಗೆ ಕೊಡುತ್ತೇನೆ .... etc. etc.. ಎಂದೆಲ್ಲ ಹೇಳುವುದು ಕೇಳಿಸಿತು. ಆದರೆ ಇದು ಯಾವ ನ್ಯಾಯ ಎಂದನಿಸಿದ್ದು ಸುಳ್ಳಲ್ಲ.
ಅಡುಗೆ ಅನಿಲ ವಿತರಕ ಮನೆಗೆ ಬರುತ್ತಾನೆ - ೩೬೦ ರೂ. ಗಳ ಬದಲು ೩೮೦ ರೂ. ಪಡೆಯುತ್ತಾನೆ...
ಪಟ್ಟಿ ಮಾಡಿದರೆ ಇನ್ನೂ ಒಂದಷ್ಟಿದೆ !!!
ಹೀಗೆ ನೀವೂ ಇದನ್ನೆಲ್ಲಾ ನೋಡಿರಬಹುದು..
ಎಂದು ನಾವು ಎಚ್ಚೆತ್ತುಕೊಳ್ಳುವೆವು?
೨೦೧೧ರ ಹೊಸ್ತಿಲಲ್ಲಿ ನಿಂತು ಹಿಂತಿರುಗಿ ನೋಡಿದಾಗ ನನಗನಿಸಿದ್ದನ್ನು ನಿಮ್ಮ ಮುಂದಿರಿಸಿರುವೆ. ಹೇಗನ್ನಿಸಿತು - ತಿಳಿಸಿ.

ಹರುಷದ ಹೊಸವರುಷ ನಿಮ್ಮದಾಗಲಿ

December 25, 2010

ಹನಿ - ೩

ಹನಿಯೊಂದು ನನ್ನ ಬಳಿ ಇದೆ
ಅದರ ಬೆಲೆಯ ನಾ ಅರಿಯೆನು
ಕೇಳು ಬಾಯಾರಿದ ಪ್ರಥಿಕನ ಕೇಳು
ಆ ಒಂದು ಹನಿಗಿರಿವ ಬೆಲೆ ಏನೆಂದು

December 22, 2010

ಚಳಿಯಲ್ಲೊಂದು ಬೆಚ್ಚಗಿನ ನೆನಪು


ಪ್ರತಿಯೊದು ಕಾಲಕ್ಕೂ ಅದರದೇ ಆದ ಸೌಂದರ್ಯವಿದೆ. ಕಾಲ ಬದಲಾಗುತ್ತಿಲ್ಲದಿದ್ದರೆ ಬದುಕು ನಿಂತ ನೀರಾಗುತ್ತಿತ್ತು. ಪ್ರಕೄತಿಯ ಮನೋಹರ ರೂಪಗಳನ್ನು ಅನುಭವಿಸಲು ಬಹಳ ಸುಂದರ. ಪ್ರತಿ ವರುಷವೂ ಹರುಷ. ಪ್ರಕೄತಿ ಒಂದು ಅದ್ಭುತ. ನಾನು ಸ್ವಭಾವತಃ ಪ್ರಕೄತಿ ಪ್ರಿಯಳು. ಅವಳ ಪ್ರತಿಯೊಂದು ಭಾವನೆಗಳು ಉಲ್ಲಾಸ ತರುತ್ತದೆ, ಹೊಸ ಸ್ಪೂರ್ತಿಯನ್ನು ನೀಡುತ್ತದೆ.

ಈ ಚಳಿಗಾಲದ ರಮ್ಯತೆಯನ್ನು ನಾನು ಇದೀಗ ೮-೯ ವರ್ಷಗಳಿಂದ ಅನುಭವಿಸುತ್ತಿರುವೆ.ನನ್ನೂರಲ್ಲಿ ಇದ್ದಿದ್ದು ಕೇವಲ ೨ ಕಾಲಗಳು. ಚಳಿಗಾಲವನ್ನು ಯಾವತ್ತೂ ಅನುಭವಿಸಿರಲಿಲ್ಲ. ೨ ನೇ ತರಗತಿಯಲ್ಲಿದ್ದಾಗ ಕಲಿತಿದ್ದ ವರ್ಷಕ್ಕೆ ೩ ಕಾಲಗಳಲ್ಲಿ ಮಾತ್ರ ಚಳಿ ಜೀವಂತವಾಗಿರುತ್ತಿತ್ತು. ಹಾಂ.... ಮತ್ತೆ ಇನ್ನೊಂದು ಹಾಡಿತ್ತು..
ಚಳಿರಪ್ಪೊ ಚಳಿರೊ...
ಚಳಿರಮ್ಮ ಚಳಿರೊ....
ಅಮ್ಮನ ಸೀರೆ ಹೊದ್ಕೊಂಡೆ ಚಳಿ ಹೋಗ್ಲೇ ಇಲ್ಲ..
ಅಪ್ಪನ ಕೋಟು ಹಾಕ್ಕೊಂಡೆ ಚಳಿ ಹೋಗ್ಲೇ ಇಲ್ಲ..
ಅಕ್ಕನ ಶಾಲು  ಹೊದ್ಕೊಂಡೆ ಚಳಿ ಹೋಗ್ಲೇ ಇಲ್ಲ..

ಇದು ಚಳಿಯ ಕಲ್ಪನೆಯನ್ನು ಕಟ್ಟಿ ಕೊಟ್ಟಿತ್ತು.
ನನ್ನ ಕಕ್ಕಿಯರ ಮನೆ ಚಳಿಯ ನಾಡಲ್ಲಿ ಇದ್ದುದ್ದರಿಂದ, ಚಳಿಗಾಲದಲ್ಲಿ ಅಲ್ಲೊಮ್ಮೆ ಹೋಗಿದ್ದಾಗ ಅನುಭವಿಸಿದ್ದೆ.

ಚಳಿ ಎಂದಾಕ್ಷಣ ನನಗೆ ನೆನಪಾಗುವುದು ನನ್ನ ಓದಿನ ದಿನಗಳು. ಚಳಿಯ ಊರಿಗೆ ಹೋಗಿ ಸಿಕ್ಕಿಬಿದ್ದಿದ್ದೆ. ದುರಾದೄಷ್ಟಕ್ಕೆ ನನ್ನ ಪರೀಕ್ಷಾ ಕಾಲವೂ ಡಿಸೆಂಬರ್ ತಿಂಗಳುಗಳೇ ಆಗಿತ್ತು.ಬೆಚ್ಚಗೆ ಹೊದ್ದು ಮಲಗೋಣವೆಂದರೆ ಪುಸ್ತಕಗಳ ಕಾಟ. ಓದೋಣವೆಂದರೆ ಚಳಿರಾಯ ಮಲಗಲು ಒತ್ತಾಯಿಸುತ್ತಿದ್ದ.ಅಂತೂ ಪರೀಕ್ಷೆ ಮುಗಿಸಿದಾಗ ಗೆದ್ದ ಭಾವನೆ.ನನ್ನ ’ರೂಮಿ’ ಚಳಿಯ ನಾಡಿನಿಂದಲೇ ಬಂದವಳಾಗಿದ್ದಳು. ಆದ್ದರಿಂದ ಅವಳ ಓದಿಗೆ ಭಂಗ ತರುವವರಾರೂ ಇರುತ್ತಿರಲಿಲ್ಲ.ನನಗೋ ಅವಳ ಓದು ಕಂಡರೆ ಹೊಟ್ಟೆ ಉರಿಯುತ್ತಿತ್ತು. ನಾನೋ ಓದುವೆನೆಂದು ಪುಸ್ತಕ ಹಿಡಿದು ಕುರ್ಚಿಯಲ್ಲಿ ಕೂರುತ್ತಿದ್ದೆ. ನಂತರ ನೆಲಕ್ಕೆ ಸವಾರಿ ಹೋಗುತ್ತಿತ್ತು, ಅನಂತರದಲ್ಲಿ ಪುಸ್ತಕದ ಮೇಲೆಯೇ ನಿದ್ದೆ ಹೋಗುತ್ತಿದ್ದೆ... ಹಾ.. ಹಾ... ಹಾ...
ಬೆಳಗ್ಗೆ ನನ್ನ ’ರೂಮಿ’ ಎದ್ದು ’coffee’ ಮಾಡಿ ಕೊಡುತ್ತಿದ್ದಳು. ವಾಹ್...ನಿಜಕ್ಕೂ ನಾನು ಅದೄಷ್ಟ ಮಾಡಿದ್ದೆ.

ಬೆಂಗಳೂರಿನಲ್ಲಿ ಚಳಿಯ ಸರಿಯಾದ ಅನುಭವ ಪಡೆಯುತ್ತಿದ್ದೇನೆ. ಚಳಿಗಾಲ ಬಂದಾಕ್ಷಣ ಬೆಚ್ಚಗಿನ ಬಟ್ಟೆಗಳು, ಕ್ರೀಮುಗಳು ಎಲ್ಲಾ ಹೊರಬರುತ್ತದೆ. ಕತ್ತಲೂ ಬೇಗ ಹಾಗೆಯೇ ಬೆಳಗೂ ನಿಧಾನ. ಏನೇ ಆದರೂ ಚಳಿಗಾಲದ ಈ ಸೋಮಾರಿತನ  ಬಲು ಪ್ರಿಯವಾದುದು.
ನಿಮ್ಮಲ್ಲೂ ಚಳಿಗಾಲದ ಬೆಚ್ಚಗಿನ ನೆನಪುಗಳಿರಬಹುದು. ನನ್ನೊಡನೆ ಹಂಚಿಕೊಳ್ಳುವಿರಾ.........

December 13, 2010

ಸ್ತ್ರೀ ಎಂದರೆ ಇಷ್ಟೇ ಸಾಕೇ ?!

ಮನದ ತುಂಬಾ ಮುಗ್ಧತೆಯಿತ್ತು
ಕಣ್ಣ ತುಂಬಾ ಅಚ್ಚರಿಯಿತ್ತು
ಬಾಯ ತುಂಬಾ ಮುಗುಳು ನಗುವಿತ್ತು’
ತಲೆ ತುಂಬಾ ಆಟದ ಗುಂಗಿತ್ತು
ಆಗ ನನ್ನ ಬಳಿ ಬಾಲ್ಯವಿತ್ತು

ಹೃದಯದ ತುಂಬಾ ಪ್ರೀತಿಯಿತ್ತು
ಮನದ ತುಂಬಾ ಸುಂದರ ನೆನಪಿತ್ತು
ಕಣ್ಣ ತುಂಬಾ ಚಂಚಲತೆಯಿತ್ತು
ತನು ತುಂಬಾ ಸುಂದರತೆ ಇತ್ತು
ಆಗ ನನ್ನ ಬಳಿ ಅವನ ಇರವಿತ್ತು

ಕೈಯಲ್ಲೊಂದು ಶಿಶುವಿತ್ತು
ಎದೆ ತುಂಬಾ ಹಾಲಿತ್ತು
ಮನ ತುಂಬಾ ನೆಮ್ಮದಿಯಿತ್ತು
ಮನೆ ತುಂಬಾ ಸಂಭ್ರಮವಿತ್ತು
ಆಗ ನನ್ನ ಬಳಿ ಮಗುವೊಂದಿತ್ತು

ತಲೆ ತುಂಬಾ ಬೆಳ್ಳಿ ಕೂದಲಿದೆ
ಮನ ತುಂಬಾ ಬೇಗೆಯಿದೆ
ಎದೆ ತುಂಬಾ ನಿಟ್ಟುಸಿರಿದೆ
ಒಂಟಿತನ ಸಂಗಾತಿಯಾಗಿದೆ
ನನ್ನ ಬಳಿಯೀಗ ವೃದ್ಧಾಪ್ಯವಿದೆ

December 07, 2010

ಶಕುನ

"ಸೆಲ್ಯೂಟ್ ಕುಪ್ಪುಳು" ಇದು ಎಲ್ಲಿಯೇ ಯಾವುದೇ ಕುಪ್ಪುಳು ಅಂದರೆ ಕೆಂಭೂತ ಕಂಡಾಗ ನನ್ನ ಮನದಲ್ಲಿ ನೆನಪಾಗುವ ಶಬ್ಧಗಳು. ಸಣ್ಣವಳಿದ್ದಾಗ ಗೆಳತಿಯೊಬ್ಬಳು ಹೇಳಿದ ನೆನಪು... ಕೆಂಭೂತ ಕಂಡಾಗ ಹೇಳಿದರೆ ಆ ದಿನ ಶುಭದಿನ, ಲಾಭದ ದಿನ ಎಂದು.
        ಇದೇ ರೀತಿ ದಿನದಲ್ಲಿ ಹಲವು ಶಕುನಗಳನ್ನು ನಂಬುತ್ತಲೇ ಇರುತ್ತೇವೆ. ಬಲದ ಕಣ್ಣು ಅದುರಿದರೆ  ಆ ದಿನ ಗಂಡು ಮಕ್ಕಳಿಗೆ ಶುಭ, ಹೆಣ್ಣು ಮಕ್ಕಳಿಗೆ ಅಶುಭ. ಹಾಗೆಯೇ ಎಡದ ಕಣ್ಣು ಹೆಣ್ಣು ಮಕ್ಕಳಿಗೆ ಶುಭ, ಗಂಡು ಮಕ್ಕಳಿಗೆ ಅಶುಭ. ಅಂಗೈ ತುರಿಸಿದರೆ ಯಾವುದೋ ಲಾಭದ ಮುನ್ಸೂಚನೆ.ಬೆಕ್ಕು ಅಡ್ದ ಬಂದರೆ ಅಶುಭ. ೧೩ ಸಂಖ್ಯೆ ಅಶುಭ. ತುಂಬಾ ನಕ್ಕ ದಿನ ಅಳು ನಿಶ್ಚಿತ (ತೀರಾ ಇತ್ತೀಚಿನವರೆಗೂ ಇದನ್ನು ನಂಬುತ್ತಿದ್ದೆ !!!). ಕಾಗೆ ಬೆಳಗಿನ ಹೊತ್ತು ಮನೆ ಎದುರಿನ ಮರದಲ್ಲಿ ಕುಳಿತು ಕೂಗಿದರೆ ಆ ದಿನ ನೆಂಟರ ಆಗಮನ. (ಕಾಂಕ್ರೀಟು ಕಾಡಿನಲ್ಲಿ ಮನೆ ಎದುರಿನ ಮರ ದುರ್ಲಭ :-) ).

             ಆದರೆ, ಈ ಶಕುನಗಳೆಂಬುದು ನಿಜವಾಗಿಯೂ ಸತ್ಯವೇ? ಇಲ್ಲಾ ಮನುಷ್ಯನ ಮನಸ್ಸಿನ ದೌರ್ಬಲ್ಯವೇ???
ನನ್ನ ಪ್ರಕಾರ ಇದು ದುರ್ಬಲ ಮನಸ್ಸಿನ ಹೊಂದಾಣಿಕೆಗಳು. " ಕಾಗೆ ಕೂರುವುದಕ್ಕೂ ರೆಂಬೆ ಮುರಿಯುವುದಕ್ಕೂ ಸರಿಯಾಯ್ತು" ಎಂಬಂತೆ ಮನುಷ್ಯ ಯಾವುದನ್ನೋ ಸಾಧಿಸಲೇ ಬೇಕೆಂದು ಹೋಗಿ ಸಾಧ್ಯವಾಗದಾಗ ಅದನ್ನು ಶಕುನಗಳಿಗೆ ಬಿಡುತ್ತಾನೆ. ಇನ್ನು ಕೆಲವೊಂದು ಬಾರಿ ತಪ್ಪೊಪ್ಪಿಕೊಳ್ಳಲು ಸಾಧ್ಯವಾಗದಾಗ ಶಕುನಗಳಿಗೆ ಬಿಡುವುದೂ ಹೌದು. ಒಂದು ಸಲ ಒಳ್ಳೆಯದಾದಾಗ ಆ ಸಮಯದ ಕೆಲವು ಘಟನೆಗಳು ಪುನರಾವರ್ತನೆ ಆಗುವುದರಿಂದ ಒಳ್ಳೆಯದಾಗುತ್ತದೆ ಎಂಬ ಮೂಢ ನಂಬಿಕೆಯೂ ಶಕುನಗಳಾಗಿ ಬದಲಾಗುತ್ತವೆ. 
ಇವಲ್ಲದೆ ಪ್ರಕೃತಿ ಮಾನವನಿಗಿಂತ ಶ್ರೇಷ್ಟ, ಪ್ರಾಣಿಗಳಿಗೆ ಮಾನವನಿಗಿಂತ ಜಾಸ್ತಿ ವಿವೇಕ ಇದೆ, ಅವುಗಳನ್ನು ಗೌರವಿಸಬೇಕೆಂಬ ದೃಷ್ಟಿಯಿಂದ ಪೂರ್ವಜರು ಕೆಲವನ್ನು ಹೇಳಿದ್ದಾರೆ. ಇಲ್ಲಿ ಹಿಂದೆ ಪ್ರಾಣಿಗಳಿಗೂ ಮಾತು ಬರುತ್ತಿತ್ತು ಎಂಬ ಅಜ್ಜಿ ಕಥೆ ನೆನಪಾಗುತ್ತದೆ.
ನೀವೂ ಹೇಳಿ ಶಕುನಗಳು  ನಿಮ್ಮ ಜೀವನದಲ್ಲಿ ಎಷ್ಟು ಮುಖ್ಯವಾಗಿವೆ ???