August 25, 2010

ಹನಿ - ೨

ಹನಿ ನೀ ಚಿಪ್ಪೊಳಗೆ ಹುದುಗಿದರೆ ಮುತ್ತಾಗುವೆ
ಹನಿ ನೀ ಭೂಮಿಗೆ ಬಿದ್ದರೆ ಮಣ್ಣಾಗುವೆ
ಹನಿ ನೀ ಸಾಗರವ ಸೇರಿದರೆ ಅನಂತವಾಗುವೆ
ಹನಿ ನೀ ನನ್ನೋಳಗಿಳಿದರೆ ನೀ ನಾನಾಗುವೆ

August 17, 2010

ಮಳೆ

ಮಳೆ ಜೀವನದ ಏಕತಾನತೆಯನ್ನು ಹೊರದಬ್ಬುತ್ತದೆ.ಒಂದೊಮ್ಮೆ ಧೋ ಎಂದು ಸುರಿಯುತ್ತದೆ, ಮಗದೊಮ್ಮೆ ಶುಭ್ರ ನಿರಭ್ರ ಆಕಾಶ. ಹೊಸ ಮಳೆ ಬಿದ್ದಾಗಿನ ಮಣ್ಣಿನ ಸುವಾಸನೆ. ರಾತ್ರಿಯಲ್ಲೊಂದಿಷ್ಟು ಕಪ್ಪೆಗಳ ’ವಟರ್ ವಟರ್’ ನೊಂದಿಗೆ ಜೀರುಂಡೆಗಳ ಸಂಗೀತ. ಮನೆಯಲ್ಲಿ ಕುಳಿತು ಕುರುಕುಲು ತಿನ್ನುತ್ತಾ ಮಳೆಯ ವೈಭವ ನೋಡುವುದೇ ಸೊಗಸು.

ಮಳೆ ಸುರಿಯಬೇಕಾದರೆ ಮುಂಚಿನ ತಯಾರಿ, ಪ್ರಕೃತಿಯು ಗಾಳಿಯೊಂದಿಗೆ ಸೇರಿ ಮಳೆಯನ್ನು ಸ್ವಾಗತಿಸುವ ರೀತಿ ಇವುಗಳೊಂದಿಗೆ ಗುಡುಗು ಸಿಡಿಲುಗಳ ಅಬ್ಬರ. ಈ ರೀತಿ ಭರ್ಜರಿಯಾಗಿ ಭೇಟಿ ಕೊಡುವ ಮಳೆಯ ವರ್ಣಿಸಲು ಪದಗಳೇ ಸಾಲದು.

ಮಳೆ ಬಿಟ್ಟ ನಂತರದ ರಮ್ಯತೆ ಯನ್ನು ಸವಿಯುವುದು ಇನ್ನೂ ಸೊಗಸು. ಮಳೆ ನೀರ ಸಿಂಚನದಿಂದ ತೃಪ್ತಗೊಂಡ ಮರ ಗಿಡಗಳು,ಕಲ್ಮಶಗಳನ್ನು ತೊಳೆದುಕೊಂಡು ಸ್ವಚ್ಚಳಾಗಿ ನಿಂತ ಭೂತಾಯಿ, ತನ್ನೆಲ್ಲಾ ಧುಃಖಗಳನ್ನು ತೋಡಿಕೊಂಡು ಹಗುರಾದ ಆಕಾಶ - ಹೀಗೆ ಯಾರನ್ನೆಂದು ಬಣ್ಣಿಸಲಿ?

ಇದೆಲ್ಲಾ ಹಳ್ಳಿ ಮನೆಯಲ್ಲಿ ಮಳೆನೊಡಿದಾಗ ಅನಿಸಿದ್ದು..ಆದರೆ, ಮಳೆ ನೆಲಕ್ಕೆ ಬೀಳಲೇ ಅವಕಾಶವಿಲ್ಲದಂತೆ ಒತ್ತೊತ್ತಾಗಿ ನಿರ್ಮಿತವಾದ ಬೆಂಗಳೂರೆಂಬೋ ಕಾಂಕ್ರೀಟು ಕಾಡಿನಲ್ಲಿ ಭಾವನೆಗಳೇ ಕಳೆದುಹೋದಂತೆ ಮಳೆಯ ಸೊಲ್ಲಾದರು ಕೇಳಿಸುವುದೊ ಎಂದು ಮಗನೊಂದಿಗೆ ಕಿಟಕಿಯಿಂದ ಇಣುಕಿ ಹೊರನೋಡುವ ಭಾಗ್ಯವಷ್ಟೇ ಈಗ ಸಧ್ಯಕ್ಕೆ ಇರುವುದು.

August 16, 2010

ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ನಿಮಗೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಕಳೆದ ಸುಮಾರು ೧೦ ವರ್ಷಗಳಿಂದ ಸ್ವಾತಂತ್ರ್ಯ ದಿನವೆಂಬುದು ಕೇವಲ ರಜೆಗೆ ಮಾತ್ರ ಸೀಮಿತವಾಗಿತ್ತು.ಇಂದು ನನ್ನ ಮಗನಿಂದಾಗಿ ಸ್ವಾತಂತ್ರ್ಯೋತ್ಸವದ ಆಚರಣೆಯನ್ನು ನೋಡುವಂತಾಯಿತು. ತ್ರಿವರ್ಣ ಧ್ವಜ ಆಗಸದಲ್ಲಿ ಹಾರುವುದನ್ನು, ವಂದೇ ಮಾತರಂ ನ ಘೋಷವನ್ನು ಕೇಳಿದೆ. ಎಲ್ಲಕ್ಕಿಂತ ಮುಖ್ಯವಾಗಿ 'ಜನ ಗಣ ಮನ' ವನ್ನು ಪೂರ್ತಿ ಮನಸ್ಸಿನಿಂದ ಹಾಡುವ ಅವಕಾಶವಾಯಿತು.

ಸಣ್ಣವಳಿದ್ದಾಗ ಶಾಲೆಯಲ್ಲಿ ಪ್ರತಿ ಆಚರಣೆಗಳು ಸಂಭ್ರಮ ತರುತ್ತಿದ್ದವು. ಸ್ಪರ್ಧೆಗಳಲ್ಲಿ ಭಾಗವಹಿಸುವುದು,   ಶಾಲಾ ಆಚರಣೆಗಳಲ್ಲಿ ಸಕ್ರಿಯವಾಗಿ ಇರುತಿದ್ದೆ. ಬೆಳೆದಂತೆಲ್ಲ ಎಲ್ಲಾ ಯಾಂತ್ರಿಕವಾಯಿತು. ಎಲ್ಲೋ ಕಳೆದು ಹೋಗುತ್ತಿರುವ ಭಯ. ಅದಕ್ಕಾಗಿ ಎಲ್ಲವನ್ನೂ ಬಿಟ್ಟು ಕೇವಲ ಮಗನ ಜೊತೆ ಇರುವ ಸಂತೋಷವನ್ನು ಪಡೆಯಲು ನಿರ್ಧರಿಸಿದೆ. ಈ ಬಿಡುವಿನಲ್ಲಿ ನನ್ನನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಬ್ಲಾಗಿಸಲು ಆರಂಭಿಸಿರುವೆ. 
ಜೀವನದ ಪ್ರತಿ ಕ್ಷಣವನ್ನು ಅನುಭವವಾಗಿ ದಾಖಲಿಸಲು ಪ್ರಯತ್ನಿಸುವೆ.

August 11, 2010

ಅದ್ವೆತ

ಕೃಷ್ಣನಾಗು ನೀ
ರಾಧಿಕೆಯಾಗುವೆ ನಾ

ಕೊಳಲಾಗು ನೀ
ನಾದವಾಗುವೆ ನಾ

ಶಕ್ತಿಯಾಗು ನೀ
ಶಕ್ತಿಕೇಂದ್ರವಾಗುವೆ ನಾ

ಪುರುಷನಾಗು ನೀ
ಪ್ರಕೃತಿಯಾಗುವೆ ನಾ

ಪ್ರೀತಿಯಾಗು ನೀ
ಧಾರೆಯಾಗುವೆ ನಾ

ನವಿಲ ಗರಿಯಾಗು ನೀ
ಅದರೊಳಗಣ ಬಣ್ಣವಾಗುವೆ ನಾ

ನೀನಾನಾಗು ಬಾ
ನಾ ನೀನಾಗುವೆ

August 05, 2010

ಬಾಂಧವ್ಯ

ನಿನ್ನ ಕೈಗಳ ಬಿಸುಪಿನ್ನೂ
ನನ್ನ ಅಂಗೈಲಿ ಬೆಚ್ಚಗಿದೆ

ನನ್ನ ಕಂಡಾಗ ನಿನ್ನ ಕಂಗಳಲ್ಲಿದ್ದ ಹೊಳಪಿನ್ನೂ
ನನ್ನ ಕಣ್ಣಲ್ಲಿ ಮಾಸಿಲ್ಲ

ನನಗೆ ಸ್ಪೂರ್ತಿಯಿತ್ತ ನಿನ್ನ ದನಿಯಿನ್ನೂ
ನನ್ನ ಕಿವಿಗಳಲ್ಲಿ ಜೀವಂತ

ನನ್ನೆಡೆಗೆ ಮಮತೆಯ ಸೆಲೆ ಹರಿಸಿದ
ನಿನ್ನ ಮನಸ್ಸು ಅಮೃತ

ಏನೆನ್ನಲಿ ಹೇಳು ಈ ಬಾಂಧವ್ಯಕೆ

August 03, 2010

ಹನಿ-೧

ಮಳೆಹನಿಯೊಂದು
ನನ್ನ ಬಳಿ ಬಂದಿದೆ
ಸಾಗರವ ಸೇರೆಂದರೆ
ಕೇಳಲೊಲ್ಲದಲ್ಲಾ

August 02, 2010

ಕಂಬನಿ

ನನ್ನೊಂಟಿತನದ ಸಂಗಾತಿಯಾಗಿ
ಬಾ

ಯಾರೂ ಇಲ್ಲದ ವೇಳೆ
ಧುಮ್ಮಿಕ್ಕಿ ಬಾ

ಮನದ ಬೇಗುದಿಯ
ಹೊರಹಾಕ ಬಾ

ದುಃಖದ ಉತ್ಪಾತವ
ಕೊನೆಗೊಳಿಸ ಬಾ

ಇನಿಯನ ವಿರಹ ವೇದನೆಯ
ಸೈರಿಸ ಬಾ

ಅಸದಳ ಸಂತೋಷವನ್ನೂ
ಬಣ್ಣಿಸ ಬಾ

ನಾಕು ಗೊಡೆಗಳೊಳಗೆ ಧುಮ್ಮಿಕ್ಕಿ
ಕಣ್ಣೀರೇ ಹರಿದು ಬಾ

August 01, 2010

ವೃಂದಾವನ

ಕೃಷ್ಣ ಸಾಮೀಪ್ಯ
ಮೌನ ಸಾಮ್ರಾಜ್ಯ
ಪ್ರೀತಿಯ ಲೋಕ
ಮಾಯೆಯ ಆಟ
ಆತ್ಮ ಪರಮಾತ್ಮಗಳ ಸಮ್ಮಿಲನ


         ನವನೀತ ಚೋರನ
         ಪುಟ್ಟ ಕಾಲ್ಗಳ ಗೆಜ್ಜೆ ನಾದನ
         ಯಶೋದಾ ಕೃಷ್ಣರ ಮುಗ್ಧ ಮಮತೆ
         ರಾಮ ಕೃಷ್ಣರ ತುಂಟಾಟ


ಯಮುನೆಯ ಜುಳುಜುಳು
ಕೊಳಲ ನಿರ್ಮಲ ದನಿ
ಗೋವುಗಳ ಅಂಬಾ ನಾದ
ನವಿಲುಗಳ ಸುಂದರ ನಾಟ್ಯ


        ಗೋಪ ಗೋಪಿಯರ ಸಂತಸ
        ಉದ್ಯಾನದ ಹಸಿರ ಸೊಬಗು
        ಬೆಳದಿಂಗಳಿರುಳ ರಾಸನೃತ್ಯ
        ರಾಧ ಕೃಷ್ಣರ ಅನುಪಮ ಪ್ರೇಮ