March 21, 2017

ಮೌನ - ಮಾತು

ಮೌನ ನೀನು
ಮಾತು ನಾನು

ನಿನ್ನ ಮೌನವಾ ನಾ ಅರಿಯದಾದೆ
ನನ್ನ ಮಾತ ನೀ ಅರಿಯದೆ ಹೋದೆ
ಭಾವಗಳಾಗಲಿ ಶಬ್ದ
ನೋಟವಾಗಲಿ ಅರ್ಥ
ಮೌನ-ಮಾತುಗಳ ಸಂಘರ್ಷ
ಕೊನೆಯಾಗಲಿ ಇಂದೇ

ನನ್ನ ಕವನಗಳ ಸ್ಪೂರ್ತಿ ನೀ
ನನ್ನ ಭಾವಗಳ ಉತ್ತರ ನೀ
ಮೌನವೇಕೆ ಬೇಕಾಯ್ತು ಮಾತೇಕೆ ಸಾಕಾಯ್ತು
ನೋಯಿಸಿದರೂ ಮೌನವೇಕೆ ಉತ್ತರವಾಯ್ತು

November 20, 2016

ಗೆಳತಿಯ ಕನಸು

ಆರಿಸಿಕೊ ಗೆಳತಿ ನಿನ್ನ ಕನಸುಗಳ
ಚೆಲ್ಲಿವೆ ನೋಡು ಹಾದಿ ಬೀದಿಯಲಿ
ಅನಾಥವಾಗಿ ಬಿದ್ದಿವೆ ನೋಡು
ನಿನ್ನವೇ ಕನಸುಗಳು

ನಿನಗೆ ಬೇಡವಾದರೆ ಬಿಕರಿಗಾದರೂ ಇಡು ಗೆಳತೀ
ಅಮೂಲ್ಯ ಕನಸುಗಳವು
ನಿನ್ನ ಸ್ವಂತದ್ದು....
ನಿನಗೆ ಮಾತ್ರ ಅದರ ಸ್ವಾಮ್ಯ
ಬಿಟ್ಟು ನಡೆದೆಯಲ್ಲೇ ಗೆಳತೀ
ಕನಸುಗಳ ಹಾದಿಯಲಿ ಬಿಟ್ಟು

ಬಾ ಗೆಳತಿ ಇನ್ನೊಂದು ಬಾರಿ
ಕನಸುಗಳ ನನಸಾಗಿಸಲು ಬಾ
ಕನಸಿಗೊಂದು ರೂಪವೀಯಲು ಬಾ
ಕಾಯುವೆ ನಾ ಉಸಿರ್‍ಹಿಡಿದು ಕಾಯುವೆ
ನಿನ್ನ ಕನಸುಗಳು ಜೀವ ತಾಳುವುದ ನೋಡಲು ಕಾಯುವೆ
ಬಾ ಗೆಳತಿ ಮತ್ತೊಮ್ಮೆ ಹುಟ್ಟಿ ಬಾ...

October 27, 2016

ವಿದಾಯ...

ಅರ್ಥಪೂರ್ಣ ವಿದಾಯವಿಲ್ಲವೇ
ಇಷ್ಟೊಂದು ಕಾಲ ಇದ್ದೆ ನಿನ್ನೊಳು ನಾ
ಇದ ಪುನಃ ಪೂರ್ಣಕ್ಕೆ ಕಳಿಸಿದೆ ನೀ
ವಿದಾಯಗಳಿಲ್ಲದೆ... ಅನಾಥದಂತೆ ಕಳಿಸಿದೆ ನೀ

ಜಗದಿ ಇದ್ದು ಎದುರಿಸಿ ಜಯಿಸಿದವಗೆ
ಬದುಕೊಂದು ಕಾಮನಬಿಲ್ಲು
ಇಲ್ಲಿನ ಸವಾಲುಗಳ ಸ್ವೀಕರಿಸಲಾರದವಗೆ
ಬದುಕೊಂದು ಯಮಭಾರ

ಉತ್ತರವಿಲ್ಲದ ಪ್ರಶ್ನೆಗಳು ಹಲವು ನನ್ನಲಿ
ಆದರೆ ಬದುಕೊಂದು ಗಣಿತವಲ್ಲ,
ಪ್ರಶ್ನೆಗೆ ಒಂದೇ ಉತ್ತರವಲ್ಲ...
ಒಂದು ಪ್ರಶ್ನೆ - ಹಲವು ಅನುಭವ.
ಪ್ರತಿ ಅನುಭವಕ್ಕೆ ಪ್ರತ್ಯೇಕ ಉತ್ತರ

ಕೊನೆಗೂ...
ಉಳಿವುದೊಂದೇ ಉತ್ತರವಿಲ್ಲದ ಪ್ರಶ್ನೆ
ಯಾಕಿರಲಿಲ್ಲ ನನಗೆ ಅರ್ಥಪೂರ್ಣ.. ಭಾವಪೂರ್ಣ ವಿದಾಯ???
ಇದ್ದೆ ನಾ ಆ ದೇಹದಲ್ಲಿ... ಇಷ್ಟೊಂದು ಕಾಲ

ಇರಲಿ...
ಬರುವೆ ನಾ ಇನ್ನೊಂದು ಬಾರಿ..
ಮತ್ತೊಂದು ರೂಪದಿ...
ಕಂಡುಕೊಳ್ಳುವೆ ಉತ್ತರವ..

September 27, 2016

ಮತ್ತೊಂದು ಒಂಟಿ ಮರ

ಕವಲುದಾರಿಯ ಆರಂಭದಿ ಇರುವ
ಒಂಟಿ ಮರ ನಾ...
ಹುಲುಸಾಗಿ ಬೆಳೆದಿಹೆ ನಾ..
ನೆರಳಿದೆ, ಫಲವಿದೆ, ಹಕ್ಕಿಗಳ ಕಲರವವಿದೆ ನನ್ನೊಳು

ಮುಂದಿನ ಬಯಲಿಂದ ಬರುವರು ಹಲವರು
ಕವಲು ದಾರಿ ಗೊಂದಲಿಸುವುದೋ... ಹಾದಿಯಲೊಂದು ತಾಣಕ್ಕಾಗೋ...
ಅರಿಯೆ ನಾ...
ವಿರಮಿಸುವರು ನನ್ನಲ್ಲಿ ಒಂದಷ್ಟು ಹೊತ್ತು
ನನ್ನ ನೆರಳಲ್ಲಿ..
ತಿನ್ನುವರು ನಾನಿತ್ತ ಫಲ

ತನು ಮನಗಳು ಹಗುರಾದವೇನೋ
ಮುಂದಿನ ದಾರಿ.. ಮುಂದಿನ ನಿಲ್ದಾಣದ ಅರಿವಾಯ್ತೇನೋ
ನನ್ನ ಮತ್ತೆ ಒಂಟಿಯಾಗಿಸಿ ಹೊರಟರೆಲ್ಲೋ
ಮುಂದಿನ ಪಯಣಿಗನ ನಿರೀಕ್ಷೆಯಲ್ಲಿ
ಮತ್ತೆ ಮತ್ತೆ ಒಂಟಿ ಮರ

August 20, 2016

ಮತ್ತೆ ಮತ್ತೆ ಚಂದಿರ

ಪ್ರೀತಿಯ ತುತ್ತನಿಡುತ್ತಿದ್ದ ಅಮ್ಮನ ಕೈ ನಿಶಾನೆ
ಆ ರಾತ್ರಿ ನಿನ್ನ ತೋರಿತ್ತು
ನನ್ನ ಅಚ್ಚರಿಯ ಕಂಗಳಲ್ಲಿ ನೀನೇ
ಆ ರಾತ್ರಿ ತುಂಬಿಕೊಂಡಿದ್ದೆ

ನನಗೋ ನೀನೊಬ್ಬನೇ ಚಂದಿರ
ನಿನಗೋ ಅಮ್ಮನ ತುತ್ತಿಗೆ ಬಾಯೊಡೆದು
ಅಚ್ಚರಿಯ ಕಂಗಳಿಂದ ನೋಡುವ
ಸಾವಿರಾರು ಪುಟ್ಟ ಮಕ್ಕಳು

ಹರೆಯ ಕಾಡುವಾಗ ನೀನಾಗಿದ್ದೆ
ನನ್ನ ಪ್ರಿಯತಮ
ನಿನ್ನೊಡನೆ ಆ ಮೌನ ಸಂಭಾಷಣೆ
ನನ್ನ ಒಂಟಿತನವ ನೀಗಿಸಿತ್ತು

ವಿಜ್ಞಾನ ನನ್ನ ಜೊತೆಯಾಗಿತ್ತು
ಆಗಸದಲ್ಲಿ ನೀನೇ ಅತಿ ಅಚ್ಚರಿಯ ವಸ್ತುವಾಗಿದ್ದೆ
ನಿನ್ನ ಓದಿದ್ದೆನು
ನಾನಾಗ

ಈಗಲೂ ನೀ ಚಂದಿರ
ನಾ ಭೂಮಿಯ ಪುಟ್ಟ ಮಗು
ಅಮ್ಮನ ಕೈತುತ್ತಿಗೆ ಬಾಯೊಡ್ಡಿರುವ ಮಗು

ಆದರೆ...
ತುತ್ತಿಡಲು ಅಮ್ಮನಿಲ್ಲ ಪಕ್ಕದಲ್ಲಿ....
ನೋಡಲು ನೀನಿಲ್ಲ ಆಗಸದಲ್ಲಿ.....

July 29, 2016

ಬೆತ್ತಲಾಗಲೇನು ಉಳಿಯಿತು.....

ಬೆತ್ತಲಾಗಲೇನು ಉಳಿಯಿತು ಈಗ
ರಕ್ತ..ಮಾಂಸಪೇಶಿ.. ಎಲುಬು..
ಚರ್ಮದ ಹೊದಿಕೆ ಹೊದ್ದ ದೇಹವಿದು

ನಾನು ಎಂಬುದರ ಮಾಲಕರಾಗಲು
ಎಲ್ಲರೂ ಹೊಂಚುವರು
ಮಾಲಕತ್ವ ಸಾಧ್ಯವೇ!?
ಈ ದೇಹ ಯಾರ್ಯಾರಿಗೋ ಋಣಿ
ಈ ಮನ ಇನ್ಯಾರ್ಯಾರಿಗೊ ಋಣಿ

ಆತ್ಮವೆಂಬೋ ಕಣ್ಣಿಗೆ ಕಾಣದ ವಿಷಯ
ಅಥವಾ
ಉಸಿರೆಂಬೋ ಅನುಭವ
ಈ ದೇಹ ಬಿಟ್ಟರೆ
ಆ ಕ್ಷಣ ದೇಹ ಕೊಳೆಯುವುದು
ಮನ ಇಲ್ಲವಾಗುವುದು

ಏನ ನಂಬುವೆಯೋ ಹುಲು ಮಾನವ
ಪರಿಶುದ್ದಿಯೇ
ಆತ್ಮಾನಂದವೇ
ತನು ತೃಪ್ತಿಯೇ

ತಿಳಿಯೆನು ನಾನು
ಪ್ರಶ್ನೆಗಳೇ ಎಲ್ಲಾ
ಉತ್ತರವು ಇಲ್ಲ


July 19, 2016

ನೀನು

ನಿನ್ನೆಡೆಗೆ ನನ್ನೊಲವು ಇಲ್ಲೆಂದು ಹೇಳುವುದು ಸುಲಭ
ಆದರಿದನು ನನ್ನೆದೆ ಜೀರ್ಣಿಸಿಕೊಳ್ಳದು

ನಿನ್ನ ಏನೆಂದು ಕರೆಯಲಿ ನಾನು
ಗೆಳತಿಯೋ ಅಲ್ಲ.. ಗೆಳೆತನಕ್ಕಿಂತ ಮೀರಿದ ಅನುಭಂದವಿದೆ.
ಮನೆಯೊಡತಿಯೇ ಅಲ್ಲ..ಬೇರಾರಿಗೋ ಆ ಸ್ಥಾನ ಮೀಸಲು ನನ್ನ ಬಾಳಲಿ
ಮನದೊಡತಿಯೇ ಅಲ್ಲ... ಒಡೆತನ ಮಾಡಲು ನೀ ನನ್ನೊಳು ಸೇರಿಲ್ಲ.

ನನ್ನ ಮನದ ನೆಮ್ಮದಿ ನೀನು
ನನ್ನ ಪ್ರಶ್ನೆಗಳ ಉತ್ತರ ನೀನು
ನನ್ನ ಮನದ ಕನ್ನಡಿ ನೀನು
ನನ್ನ ಪ್ರೀತಿ ನೀನು